ಶ್ರೀಮದ್ರಾಮಾಯಣಾಮೃತಮ್ ೨

ಶ್ರೀಮದ್ರಾಮಾಯಣಾಮೃತಮ್ ೨

*ಸರ್ಗರಾಮಾಯಣಮ್*
*(ದಂಬೆಕೃಷ್ಣಮೂರ್ತಿವಿರಚಿತಮ್)*

*ಬಾಲಕಾಂಡಃ*

*_“ಶ್ರೀಮದ್ರಾಮಾಯಣಕಥಾಸಂಕ್ಷೇಪಃ” ನಾಮ್ನಃ ಪ್ರಥಮಸರ್ಗಸ್ಯ ಸಾರಃ_*

_(ಪ್ರಕೃತಿಶ್ಛನ್ದೋಜಾತಂ ಸ್ರಗ್ಧರಾವೃತ್ತಮ್ ೨೧ ಅಕ್ಷರಮಿತಮ್―  *“ಮ್ರಭ್ನೈರ್ಯಾನಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇऽಯಮ್”* )_


*_ಶ್ರೀಮದ್ರಾಮಾ-ಯಣೇ ಕಃ ಪರಮಪುರುಷ ಇ-ತ್ಯಸ್ತಿ ಲೋಕೇ ಗುಣೀ ಚ |_*
*_ಧರ್ಮಜ್ಞೋ ವೀ-ರ್ಯವಾನ್ಸ-ತ್ಯವಿಮಲಚರಿತ-ಸ್ತಸ್ಯ ಲೀಲಾವಿಶೇಷಮ್ ||_*
*_ವಾಲ್ಮೀಕಿರ್ನಾ-ರದಂ ತು ಪ್ರಥಮಪದಸರೋ-ಜೇ ಪುರಾ ಪೃಚ್ಛತೀತಿ |_*
*_ಸಂಕ್ಷೇಪೇಣಾ-ವದತ್ತಂ ಸುರಮುನಿರಮಿತಾಂ ರಾಮಭದ್ರಪ್ರಗಾಥಾಮ್ || ೧ ||_*

*ವಾಲ್ಮೀಕಿರಾಮಾಯಣದ ಬಾಲಕಾಂಡದ “ಶ್ರೀಮದ್ರಾಮಾಯಣಕಥಾಸಂಕ್ಷೇಪ”ವೆಂಬ ಒಂದನೆಯ ಸರ್ಗದ ಸಾರ*
(ಭಾಮಿನೀಷಟ್ಪದೀ)
_*ವರುಣಸುತ ವಾಲ್ಮೀಕಿ ಮುನಿಪನು*_
_*ಕರುಣಿ ನಾರದಪದಕೆರಗುತಲಿ*_
*_ಪರಮಪುರುಷನದಾರು ಜಗದೊಳಗಿರ್ಪ ಪೇಳೆನಲು |_*
*_ಸುರಮುನೀಂದ್ರನು ತನ್ನ ಮನದಲಿ_*
*_ಹರಿಯ ಧ್ಯಾನಿಸಿ ಭಕುತಿಯಿಂದಲಿ_*
*_ಯೊರೆದ ರಾಮಾಯಣವನತಿ ಸಂಕ್ಷೇಪರೂಪದಲಿ || ೧ ||_*

_ಶ್ರೀಮದ್ರಾಮಾಯಣದ ಬಾಲಕಾಂಡದ ಪ್ರಥಮಸರ್ಗದಲ್ಲಿ ವರುಣಸುತನಾದ ವಾಲ್ಮೀಕಿಮಹರ್ಷಿಯು ಲೋಕಕಾರುಣ್ಯವರಿಷ್ಠರಾದ ನಾರದರನ್ನು ಕುರಿತು, “ಲೋಕದಲ್ಲಿ ಪ್ರಸ್ತುತ ಗುಣವಂತನೂ, ಧರ್ಮದ ಮರ್ಮವನ್ನರಿತು ನಡೆಯುವವನೂ, ವೀರನೂ, ಸತ್ಯವೂ ಅಕಳಂಕವೂ ಆದ ಚಾರಿತ್ರ್ಯವುಳ್ಳವನೂ ಆದ ಪರಮಪುರುಷನಾರಿರುವನು?” ಎಂದು ಹಾಗೂ ಆತನ ವಿಶೇಷವೂ, ಲೋಕಸೀಮಾತೀತವೂ ಆದ ಲೀಲಾಮಯ ಚರಿತೆಯನ್ನು ಮೊದಲಿಗೆ ಪ್ರಶ್ನಿಸುತ್ತಾನೆ. ಆಗ, ಸುರಮುನಿಗಳಾದ ನಾರದರು ಶ್ರೀಹರಿಯನ್ನು ಭಕ್ತಿಯಿಂದ ಮನದಲ್ಲಿ ಧ್ಯಾನಿಸಿ, ಶ್ರೀರಾಮಭದ್ರನ ಪರಮಪವಿತ್ರವಾದ ಚರಿತೆಯಾದ ಶ್ರೀಮದ್ರಾಮಾಯಣವನ್ನು ಸಂಕ್ಷೇಪರೂಪವಾಗಿ ವಾಲ್ಮೀಕಿಗಳಿಗೆ ಉಪದೇಶಿಸಿದರು. ಇದು ರಾಮಾಯಣದ ಬಾಲಕಾಂಡದ ಪ್ರಥಮಸರ್ಗದ ಸಾರವು._

*ಕ್ರೌಞ್ಚವಧೋ ನಾಮ್ನಃ ದ್ವಿತೀಯಸರ್ಗಸ್ಯ ಸಾರಃ*

_(ಸಪ್ತದಶಾಕ್ಷರಂ ಅತ್ಯಷ್ಟಿಶ್ಛನ್ದೋಜಾತಂ ಮನ್ದಾಕ್ರಾನ್ತಾವೃತ್ತಮ್― “ಮನ್ದಾಕ್ರಾನ್ತಾ ಜಲಧಿಷಡಗೈರ್ಮ್ಭೌ ನತೌ ತಾದ್ಗುರೂ ಚೇತ್”)_

*_ವಾಲ್ಮೀಕಿಸ್ತಂ ಸರಸಮಿಥುನೇ ಕ್ರೌಞ್ಚಯುಗ್ಮೇ ತು ದೃಷ್ಟ್ವಾ_*
*_ಕಶ್ಚಿದ್ವ್ಯಾಧಃ ಪುರುಷವಪುಷಂ ಹಂತಿ ಶೋಕೇ ಶಶಾಪ |_*
*_ಶೋಕಃ ಶ್ಲೋಕೇ ಸುರುಚಿರಗತೌ ಪೂರ್ಣತಾಂ ಯಾತಿ ತತ್ರ_*
*_ಆಶೀರ್ದತ್ತಾ ವಿಧಿವದನತೋ ರಾಮಚಾರಿತ್ರಲೇಖೇ || ೨ ||_*

*ಕ್ರೌಂಚವಧೆಯೆಂಬ ೨ನೇ ಸರ್ಗದ ಸಾರ*
(ಭಾಮಿನೀಷಟ್ಪದಿ)

*_ವರದ ನಾರದ ತೆರಳಲಾ ಮುನಿ_*
*_ವರ ನದೀಮಜ್ಜನಕೆ ತಮಸಾ_*
*_ಸರಿತೆಗೈತಂದನು ಭರದ್ವಾಜನ ಸಹಿತಲಾಗ |_*
*_ಸುರುಚಿರದ ಕ್ರೌಂಚದ್ವಯದಿ ಹತ_*
*_ಪುರುಷವಾಯ್ತವ ಶಾಪವಿತ್ತನು_*
*_ವರ ವಿಧಾತನು ಶೋಕ ಶ್ಲೋಕವದೆಂದು ಪೆಸರಿಸಿದ || ೩ ||_*

_ಹೀಗೆ ದೇವರ್ಷಿ ನಾರದರು ಅನುಗ್ರಹಿಸಿ ತೆರಳಲು, ಆ ವಾಲ್ಮೀಕಿ ಮಹರ್ಷಿಯು ತನ್ನ ನದೀಸ್ನಾನಕ್ಕೆಂದು ತಮಸಾನದೀತೀರಕ್ಕೆ ತನ್ನ ಶಿಷ್ಯನಾದ ಭರದ್ವಾಜನೊಡನೆ ಹೋದನು. ಅಲ್ಲಿ ವಾಲ್ಮೀಕಿಯು ಕ್ರೌಂಚಪಕ್ಷಿಜೋಡಿಯೊಂದು ರಮಿಸುತ್ತಿದ್ದುದನ್ನು ನೋಡನೋಡುತ್ತಿದ್ದಂತೆಯೇ, ನಿಷಾದ / ಬೇಡನೊಬ್ಬ ಅವುಗಳಲ್ಲಿ ಗಂಡುಹಕ್ಕಿಯನ್ನು ಬಾಣದಿಂದ ಹೊಡೆದುಹಾಕಿದಾಗ, ಅದು ರಕ್ತಸಿಕ್ತವಾಗಿ ಪ್ರಾಣಬಿಟ್ಟಿತು. ಅದನ್ನು ಕಂಡು ರೋದಿಸುತ್ತಿದ್ದ ಹೆಣ್ಣು ಕ್ರೌಂಚದ ಹೃದಯವಿದ್ರಾವಕ ದೃಶ್ಯವನ್ನು ಕಂಡು ಶೋಕತಪ್ತರಾಗಿ ಕಣ್ಣೀರು ಸುರಿಸಿದ ಮಹರ್ಷಿಗಳು ಕ್ರೋಧಾವಿಷ್ಟರಾಗಿ *“ಮಾ ನಿಷಾದ…”* ಮುಂತಾಗಿ ವ್ಯಾಧನಿಗೆ ಶಾಪವಿತ್ತರು. ಆ ಶಾಪವು ೮ ಅಕ್ಷರಗಳ ೪ ಪಾದಗಳ ಶ್ಲೋಕರೂಪದಲ್ಲಿ ತಾಳವಾದ್ಯಗಾಯನಯೋಗ್ಯವಾಗಿ ಮೂಡಿಬಂದುದು ಅವರಿಗೇ ಅಚ್ಚರಿಯುಂಟುಮಾಡಿತು. ಆಗ ಸಾಕ್ಷಾತ್ ಬ್ರಹ್ಮನೇ ಬಂದು ಅವರನ್ನು ರಾಮಾಯಣರಹಸ್ಯಸಮಗ್ರವೂ ವಿದಿತವಾಗಿ, ಪೂರ್ಣಕಾವ್ಯಸಿದ್ಧಿಯಾಗಲೆಂದು ಹರಸಿದರು._

*“ವಾಲ್ಮೀಕಿಮುನಿನಾ ಸಪ್ತಕಾಂಡಾತ್ಮಕಂ ಶ್ರೀಮದ್ರಾಮಾಯಣಪ್ರಣಯನಮ್” ನಾಮ್ನಃ ತೃತೀಯಸರ್ಗಸ್ಯ ಸಾರಃ*

_(ನವದಶಾಕ್ಷರಾತ್ಮಕಂ ಅತಿಧೃತಿಚ್ಛನ್ದೋಜಾತಂ ಶಾರ್ದೂಲವಿಕ್ರೀಡಿತವೃತ್ತಮ್― “ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ ಶಾರ್ದೂಲವಿಕ್ರೀಡಿತಮ್”)_

*_ದೇವರ್ಷೇರ್ಗುರುತುಲ್ಯತಾವಿಧಿಕೃಪಾಯೋಗಾದಿಭಿಸ್ತಾಪಸೋ_*
*_ವಾಲ್ಮೀಕಿಃ ಪ್ರಣಿನಾಯ ರಾಘವಕಥಾಂ ಯೋಗಾಶ್ರಿತೋ ಮಾನಸಃ |_*
*_ಬಾಲಂ ಕಾಣ್ಡಮಯೋಧ್ಯಯಾ ಚ ಸಹಿತಂ ಹ್ಯಾರಣ್ಯಕಿಷ್ಕಿನ್ಧಕೌ_*
*_ಸೌನ್ದರ್ಯಂ ತ್ವಿಹ ಯುದ್ಧಮುತ್ತರಯುತಂ ಸಪ್ತಾತ್ಮಿಕಾಂ ಪಾವನೀಮ್ ||_*

*“ವಾಲ್ಮೀಕಿಮುನಿಯಿಂದ ೭ ಕಾಂಡಗಳ ಶ್ರೀಮದ್ರಾಮಾಯಣ ವಿರಚನೆ” ಎಂಬ ಮೂರನೇ ಸರ್ಗದ ಸಾರವು*

_(ಭಾಮಿನೀಷಟ್ಪದಿ)_

*_ನಾರದರ ಉಪದೇಶ  ಬೊಮ್ಮನ-_*
*_-ಪಾರಕೃಪೆಯಿಂ ಮುನಿಪ ಯೋಗವಿ_*
*_ಚಾರದಿಂದಲಿ ರಾಮಕಥೆಯ ಕರಾಗ್ರದೊಳು ಕಂಡು |_*
*_ವಿರಚಿಸಿದನದನೇಳು ಕಾಂಡದಿ_*
*_ಸುರುಚಿರದಿ ತಾ ಬಾಲಯೋಧ್ಯೆಯ_*
*_ನರಣ್ಯವ ಕಿಷ್ಕಿಂಧೆಸೀತಾಯುದ್ಧದುತ್ತರದಿ || ೩ ||_*

_ದೇವರ್ಷಿ ನಾರದರನ್ನು ಗುರುವಾಗಿ ಕಂಡು, ಅವರ ರಾಮಾಯಣಸಂಕ್ಷೇಪದ ಉಪದೇಶವನ್ನು (೧ನೆಯ ಸರ್ಗ) ಪಡೆದು, ವಾಗೀಶನಾದ ಪಿತಾಮಹ ಬ್ರಹ್ಮನ ಪ್ರೇರಣೆ, ಅನುಗ್ರಹಗಳಿಂದ, ಪರಮ ತಾಪಸನಾದ ವಾಲ್ಮೀಕಿ ಮಹರ್ಷಿಯು ಬಾಹ್ಯಾಭ್ಯಂತರ ಶುಚಿರ್ಭೂತನಾಗಿ, ದರ್ಭಾಸದ ಮೇಲೆ ಕುಳಿತು ಯೋಗಬಲದಿಂದ ಮನಸ್ಸನ್ನು ಶ್ರೀರಾಮನ ಜೀವನಪಥದ ಮೇಲೆ ಏಕಾಗ್ರಗೊಳಿಸಿ, ತನ್ನ ಕರತಲ ಆಮಲಕ / ತನ್ನ ಅಂಗೈಯಲ್ಲಿನ ನೆಲ್ಲಿಕಾಯಿಯನ್ನು ಕಾಣುವಷ್ಟು ಸ್ವಷ್ಟವಾಗಿ ಸಂಪೂರ್ಣ ರಾಮಚಾರಿತ್ರವನ್ನು ಜ್ಞಾನದೃಷ್ಟಿಯಿಂದ ಕಂಡು, ಬಾಲಕಾಂಡ, ಅಯೋಧ್ಯಾ-ಅರಣ್ಯ-ಕಿಷ್ಕಿನ್ಧಾ-ಸುಂದರ/ಹನೂಮತ್/ಸೀತಾ-ಯುದ್ಧ-ಉತ್ತರವೆಂಬ ಸಪ್ತಕಾಂಡಗಳಲ್ಲಿ ಪರಮಪಾವನವಾದ ಶ್ರೀಮದ್ರಾಮಾಯಣವನ್ನು ಪರಿಗ್ರಹಿಸಿ ತುಂಬಿ ವಿಶೇಷರೀತಿಯಿಂದ ರಚಿಸಿದನು. ಇದು ರಾಮಾಯಣ ಬಾಲಕಾಂಡದ ೩ನೆಯ ಸರ್ಗದ ಸಾರ. ಅಲ್ಲದೆ, ಸಮಗ್ರ ರಾಮಕಥೆಯ ಸಂಕ್ಷೇಪವೂ ಇದರಲ್ಲಿ ೧ನೆಯ ಸರ್ಗದಲ್ಲಿ ಬಂದ ಶೈಲಿಗಿಂತ ವಿಭಿನ್ನವಾಗಿ, ಆದರೆ ಅದೇ ಹಾದಿಯಲ್ಲಿ ಮತ್ತೊಮ್ಮೆ ಬರುತ್ತದೆ._

“ವಾಲ್ಮೀಕಿಮುನಿವಿರಚಿತಸ್ಯ ಚತುರ್ವಿಂಶತಿಸಹಸ್ರಶ್ಲೋಕಾತ್ಮಕರಾಮಾಯಣಮಹಾಕಾವ್ಯಸ್ಯಾದ್ಯಸ್ಯ ರಾಮಾಸ್ಥಾನೇ ಲವಕುಶೈಃ ಗಾಯನಮ್” ನಾಮ್ನಃ ಚತುರ್ಥಸರ್ಗಸ್ಯ ಸಾರಃ

_(ನವದಶಾಕ್ಷರಾತ್ಮಕಂ ಅತಿಧೃತಿಚ್ಛನ್ದೋಜಾತಂ ಶಾರ್ದೂಲವಿಕ್ರೀಡಿತವೃತ್ತಮ್― “ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ ಶಾರ್ದೂಲವಿಕ್ರೀಡಿತಮ್”)_


ವಾಲ್ಮೀಕಿರ್ಮುನಿಪುಙ್ಗವೋ ವ್ಯರಚಯದ್ರಾಮಾಯಣಂ ಮೋಕ್ಷದಂ
ಶ್ಲೋಕೇಷು ದ್ವ್ಯಯುತೋತ್ತರೇಷು ಚ ಚತುಸ್ಸಾಹಸ್ರಿಕೇಷ್ವಾದಿಮಮ್ |
ಕಾವ್ಯಂ ತಾಲಲಯಾದಿಭಿಃ ಕುಶಲವೈರ್ಗೀತಂ ಸಭಾಮಂಡಪೇ
ಶ್ರೀರಾಮೋऽರಮತ ಪ್ರಶಸ್ತಿಮದದಾತ್ ಸರ್ಗೇ ತುರೀಯೇ ಯಥಾ || ೪ ||

“ಕುಶಲವರಿಂದ ರಾಮನ ಆಸ್ಥಾನದಲ್ಲಿ ವಾಲ್ಮೀಕಿಮುನಿವಿರಚಿತವಾದ ೨೪,೦೦೦ ಶ್ಲೋಕಗಳ ಆದಿಮಹಾಕಾವ್ಯವಾದ ರಾಮಾಯಣದ ಗಾಯನ” ಎಂಬ ನಾಲ್ಕನೇ ಸರ್ಗದ ಸಾರವು

(ಭಾಮಿನೀಷಟ್ಪದಿ)

ವರಮುನಿಯು ವಾಲ್ಮೀಕಿ ಕಾವ್ಯವ
ವಿರಚಿಸಿದ ರಾಮಾಯಣವ ತಾ
ನೆರಡಯುತಯುತ ನಾಲ್ಕುಸಾವಿರ ಸಂಸ್ಕೃತಶ್ಲೋಕ |
ವಿರುವ ತೆರದಲಿ ಬಳಿಕ ಲವಕುಶ
ರರುಹಿದರು ರಾಘವನ ಸಭೆಯಲಿ
ಪರಮತೋಷದಿ ರಾಮ ಬಹುಸನ್ಮಾನಿಸಿದನವರ || ೪ ||

ಮುನಿಶ್ರೇಷ್ಠನಾದ ವಾಲ್ಮೀಕಿಯು ಲೋಕದಲ್ಲೇ ಮೊತ್ತಮೊದಲನೆಯದೆನಿಸಿದ ಪಾದಬದ್ಧವೂ, ಛಂದೋಬದ್ಧವೂ ಆದ ಪದ್ಯರೂಪದ ೨ ಹತ್ತುಸಾವಿರ ಮತ್ತು ೪ ಸಾವಿರ, ಅಂದರೆ ೨೪ ಸಾವಿರ ಸಂಸ್ಕೃತಶ್ಲೋಕರೂಪದಲ್ಲಿರುವಂತೆ ಮೋಕ್ಷದಾಯಕವಾದ ಶ್ರೀಮದ್ರಾಮಾಯಣವೆಂಬ, ಮಹಾವಿಷ್ಣುವಿನ ಅವತಾರವಾದ ನರಪುರುಷರೂಪದ, ಮರ್ಯಾದಾಪುರುಷೋತ್ತಮ ಶ್ರೀಸೀತಾರಾಮಚಂದ್ರನ ಪುಣ್ಯಚರಿತೆಯನ್ನು ವಿಶೇಷವಾಗಿ ರಚಿಸಿದನು. ಈ ಆದಿಕಾವ್ಯವು ಮೊದಲಿಗೆ ವಾಲ್ಮೀಕಿಮುನಿಗಳಿಂದ ತಮ್ಮ ಆಶ್ರಮದಲ್ಲಿದ್ದ ಸೀತಾರಾಮಪುತ್ರರಾದ ಲವ-ಕುಶರಿಗೆ ಉಪದಿಷ್ಟವಾಗಿ, ಅವರೀರ್ವರು ತಾಳ-ಲಯ-ಸಂಗೀತಮಯವಾಗಿ ವಾದ್ಯವಾದನಗಳೊಂದಿಗೆ ಸುಶ್ರಾವ್ಯವಾಗಿ ಹಾಡುವುದನ್ನು ಭರತಾದಿಗಳಿಂದ ಕೇಳಿದ ರಾಮನು ಅವರನ್ನು ತನ್ನ ಆಸ್ಥಾನಕ್ಕೆ ಕರೆಸಿ, ತನ್ನ ರಾಜಸಭೆಯಲ್ಲಿ ಹಾಡಿಸಿ, ಆನಂದತುಂದಿಲನಾಗಿ ಅವರನ್ನು ಪ್ರಶಸ್ತಿಗಳಿಂದ ಬಹುವಾಗಿ ಸನ್ಮಾನಿಸಿದನು ಎಂಬುದು ವಾಲ್ಮೀಕಿರಾಮಾಯಣದ ಮೊದಲನೆಯದಾದ ಬಾಲಕಾಂಡದ ನಾಲ್ಕನೆಯ ಸರ್ಗದ ಸಾರವು.

"ರಾಜ್ಞಾ ದಶರಥೇನ ರಕ್ಷಿತಾಯಾಃ, ಅಯೋಧ್ಯಾಯಾಃ, ವರ್ಣನಮ್" ನಾಮ್ನಃ ಪಂಚಮಸರ್ಗಸ್ಯ ಸಾರಃ


_(ಚತುರ್ದಶಾಕ್ಷರಾತ್ಮಕಂ ಶಕ್ವರೀಚ್ಛಂದೋಜಾತಂ ವಸಂತತಿಲಕಾವೃತ್ತಮ್—"ಉಕ್ತಾ ವಸಂತತಿಲಕಾತಭಜಾಜಗೌಗಃ")_


ಪೂರ್ವಂ ಸಮೃದ್ಧಜನತಾ ಪರಿತುಷ್ಟಭಾವಾ

ಧಾನ್ಯಪ್ರಭೂತಕನಕೈರುಪಭುಜ್ಯಮಾನಾ |

ದೇಶೇ ತು ಕೋಸಲ ಇತಿ ಹ್ಯಮರಾವತೀವ 

ಪುರ್ಯಾಮಯೋಧ್ಯಮಿತಿ ವೈ ಮನುನಿರ್ಮಿತಾಯಾಮ್ || ೫ ||


"ರಾಜಾ ದಶರಥನಿಂದ ರಕ್ಷಿತವಾದ ಅಯೋಧ್ಯೆಯ ವರ್ಣನೆ / ಬಣ್ಣನೆ" ಎಂಬ ೫ನೆಯ ಸರ್ಗದ ಸಾರವು


_(ಭಾಮಿನೀಷಟ್ಪದಿ)_


ಹಿಂದೆ ಸಪ್ತದ್ವೀಪಧರಣಿಯ

ಚಂದದಿಂದಲಿ ಮನುವು ಆಳಿದ

ನಂದು ಸಗರನು ಬಳಿಕ ಸಾಗರವನ್ನು ನಿರ್ಮಿಸಿದ |

ವಂದನೀಯದ ಸೂರ್ಯವಂಶದಿ

ಬಂದನಜಸುತ ದಶರಥಾಖ್ಯ ತಾ

ನಂದದಿಂ ಕೋಸಲದಯೋಧ್ಯಾಪುರಿಗೆ ಸುರಪತಿಯೊಲ್ || ೫ ||


ಬಹು ಹಿಂದೆ, ಚತುರ್ಮುಖಬ್ರಹ್ಮನ, ಈ ಶ್ವೇತವರಾಹಕಲ್ಪವೆಂಬ (ಆದಿ-ಭೂ-ಶ್ವೇತ-ವರಾಹ-ಸ್ವಾಮಿಯಾಗಿ ಪರಮಾತ್ಮನ ಕಲ್ಪಾವತಾರವಾದಾಗ)— ಸ್ವಾಯಂಭುವ ಸ್ವಾರೋಚಿಷ ಉತ್ತಮ ತಾಮಸ ರೈವತ ಚಾಕ್ಷುಷ ವೈವಸ್ವತ ಸಾವರ್ಣಿ ದಕ್ಷಸಾವರ್ಣಿ ಬ್ರಹ್ಮಸಾವರ್ಣಿ ಧರ್ಮಸಾವರ್ಣಿ ರುದ್ರಸಾವರ್ಣಿ ದೇವಸಾವರ್ಣಿ ಮತ್ತು ಇಂದ್ರಸಾವರ್ಣಿನಾಮಕ ೧೪ ಮನ್ವಂತರಾತ್ಮಕವಾದ— ದಿನದ ಹಗಲಲ್ಲಿ ೭ನೆಯದಾದ— ಭಗವಂತನ ವಾಮನಾವತಾರವೂ, ಪುರಂದರನು ಇಂದ್ರನೂ, ವಸುಗಳೂ ರುದ್ರರೂ ಆದಿತ್ಯರೂ ವಿಶ್ವೇದೇವತೆಗಳೂ ಮರುದ್ಗಣಗಳೂ ಅಶ್ವಿನಿಗಳೂ ಋಷಭರೂ ದೇವತೆಗಳಾದಾಗ, ಕಶ್ಯಪ ಅತ್ರಿ ವಶಿಷ್ಠ ವಿಶ್ವಾಮಿತ್ರ ಗೌತಮ ಜಮದಗ್ನಿ ಭರದ್ವಾಜರು ಸಪ್ತರ್ಷಿಗಳಾದಾಗ, ವೈವಸ್ವತಮನುವಿಗೆ ಇಕ್ಷ್ವಾಕು ನೃಗ ಶರ್ಯಾತಿ ದೃಷ್ಟ ಧೃಷ್ಟ ಕರೂಷಕ ನರಿಷ್ಯಂತ ಪೃಷಧ್ರ ನಾಭಾಗ ಮತ್ತು ಕವಿಯೆಂಬವರು ೧೦ ಮಂದಿ ಪುತ್ರರಾದಾಗ—  ಈ ವೈವಸ್ವತಮನ್ವಂತರದಲ್ಲಿ, ಸಪ್ತದ್ವೀಪಾತ್ಮಕ ವಸುಂಧರೆಯು ವೈವಸ್ವತ ಮನು ಪ್ರಜಾಪತಿಯ ಆಳ್ವಿಕೆಯಲ್ಲಿತ್ತು. ಆತನ ವಂಶದಲ್ಲೇ ಸಗರ ಮಹಾರಾಜನು ಸಾಗರವನ್ನು ನಿರ್ಮಿಸಿದ ರಾಜರ್ಷಿ. ಅಂತಹ ವಿವಸ್ವಾನ್ ನಾಮಕ ಸೂರ್ಯನ ಪುತ್ರನಾದ ವೈವಸ್ವತನ ಸೂರ್ಯವಂಶದಲ್ಲೇ ರಾಮಾವತಾರವಾಯಿತು. ಹಿಂದೆ ಧರ್ಮದತ್ತನೆಂಬ ವಿಪ್ರನೇ ಮುಂದೆ ದಶರಥನಾಗಿ ಜನಿಸಿದನು. ಹಿಂದೆ ಸೌರಾಷ್ಟ್ರದೇಶದ, ಭಿಕ್ಷುವೆಂಬ ದ್ವಿಜನ ಪತ್ನಿಯಾಗಿದ್ದ, ದುಷ್ಟೆಯಾಗಿದ್ದ ಕಲಹೆಯೆಂಬವಳು ಧರ್ಮದತ್ತನ ಕೈಯಿಂದ ತುಳಸೀತೀರ್ಥವನ್ನು ಕುಡಿದ ಪುಣ್ಯದಿಂದ ಕೈಕೇಯಿಯಾಗಿ ಜನಿಸಿ ದಶರಥಪತ್ನಿಯರಲ್ಲೊಬ್ಬಳಾದಳು. 


ಮನುವು ಕೋಸಲದೇಶದ ಸರಯೂತೀರದಲ್ಲಿ ಅಯೋಧ್ಯಾನಗರಿಯನ್ನು ನಿರ್ಮಿಸಿದನು. ಮುಂದೆ ಅಜಮಹಾರಾಜನ ಮಗ, ರಾಮನ ತಂದೆ ದಶರಥನು ಇಂದ್ರನ ಅಮರಾವತಿಯಂತೆ ಸಕಲ ಶಾಂತಿ, ಸುಖ, ಸಮೃದ್ಧಿಗಳಿಂದ ಪ್ರಜಾಪಾಲನೆಯನ್ನು ಮಾಡುತ್ತಿದ್ದನು. ಇದು ೫ನೆಯ ಸರ್ಗದ ಸಾರ.


"ರಾಜ್ಞಃ ದಶರಥಸ್ಯ ರಾಜ್ಯಭಾರಃ, ತತ್ರಸ್ಥಾನಾಂ ಜನಾನಾಂ ಜೀವನಮ್" ನಾಮ್ನಃ ಷಷ್ಠಸರ್ಗಸ್ಯ ಸಾರಃ


_(ಏಕಾದಶಾಕ್ಷರಾತ್ಮಕಂ ತ್ರಿಷ್ಟುಪ್-ಛಂದೋಜಾತಮ್ ಇಂದ್ರವಜ್ರಾವೃತ್ತಮ್— "ಸ್ಯಾದಿಂದ್ರವಜ್ರಾ ಯದಿ ತೌ ಜಗೌಗಃ")_


ಸತ್ಯಾಭಿಸಂಧೋऽಜಸುತೋ ಮಹಾತ್ಮಾ

ಧರ್ಮಾರ್ಥಕಾಮಪ್ರದಕರ್ಮನಿಷ್ಠಃ |

ಸಚ್ಛಾಸ್ತ್ರನಿಷ್ಠಾನ್ ಸ ಶಶಾಸ ಲೋಕಾನ್

ಧೂತಾರಿದುಷ್ಟೋऽಪರ ಇಂದ್ರವದ್ವೈ || ೬ ||


"ರಾಜಾ ದಶರಥನ ರಾಜ್ಯಭಾರ ಹಾಗೂ ಅಲ್ಲಿನ ಜನಜೀವನ" ಎಂಬ ೬ನೆಯ ಸರ್ಗದ ಸಾರ


_(ಭಾಮಿನೀಷಟ್ಪದಿ)_


ಸತ್ಯ-ಸಾರ್ಥಕವೆಂಬ ಬಾಗಿಲು

ನಿತ್ಯ ಭದ್ರವಿರುತ್ತಲಗಳಿಗ

ಳತ್ಯತೀವ ಸುಶೋಭಿ ಶಿವಮಯ ಗೃಹಗಳಿಂ ಕೂಡಿ |

ಸತ್ಯದೂರರ ಶತ್ರುನಿವಹವ

ನಿತ್ಯ ನಿಗ್ರಹಿಸುತ್ತ ದಶರಥ

ಸತ್ಯಧರ್ಮದಿ ಪಾಲಿಸಿರ್ದನು ಕೋಸಲಾಯೋಧ್ಯೆ || ೬ ||


ಸೂರ್ಯವಂಶದ ಅಜಮಹಾರಾಜನ ಸುತನೂ, ಏಕಕಾಲದಲ್ಲಿ ದಶದಿಕ್ಕುಗಳಿಂದಲೂ ಶತ್ರುಗಳನ್ನು ರಥಿಕನಾಗಿ ಹಿಮ್ಮೆಟ್ಟಿಸಬಲ್ಲವನೂ ಆದ ರಾಜಾ ದಶರಥನು, ಸದಾ ಸತ್ಯಾಭಿಸಂಧನಾಗಿ, ಧರ್ಮ-ಅರ್ಥ-ಕಾಮಗಳನ್ನು ಕೊಡುವ ಕರ್ತವ್ಯಕರ್ಮಗಳನ್ನಾಚರಿಸುತ್ತ, ತನ್ನ ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿ ಧರ್ಮಿಷ್ಠ ಪ್ರಜೆಗಳನ್ನೇ ಹೊಂದಿದ್ದು, ಶತ್ರುಗಳನ್ನೂ ದುಷ್ಟರನ್ನೂ ಶಿಕ್ಷಿಸುತ್ತಾ ಇನ್ನೊಬ್ಬ ಇಂದ್ರನೋ ಎಂಬಂತೆ ಪ್ರಜಾಪಾಲನೆಯನ್ನು ಮಾಡುತ್ತಿದ್ದನು. ಆತನ ಕೋಸಲ ದೇಶದ ರಾಜಧಾನಿ ಅಯೋಧ್ಯಾನಗರವು ಸತ್ಯ-ಸಾರ್ಥಕತೆಗಳೆಂಬ ದೃಢವಾದ ದ್ವಾರಗಳಿಗೆ ಬಲವಾದ ಚಿಲಕಗಳ ಮೂಲಕ ಬಂಧಿಸಲ್ಪಟ್ಟು, ನಿಜಾರ್ಥದಲ್ಲೂ ಶತ್ರುಯೋಧರಿಗೆ ಅ-ಯೋಧ್ಯಾ / ಅಭೇದ್ಯವೇ ಆಗಿತ್ತು. ಅತ್ಯಂತ ಶೋಭಾಯಮಾನವೂ, ಮಂಗಳವಾದ ಭಗವನ್ನಾಮಸ್ಮರಣಾದಿ ಸುನಾದಗಳಿಂದ ಶಿವಮಯವಾಗಿಯೂ ಇದ್ದವು ಆ ನಗರದ ಗೃಹಗಳು. ಹೀಗೆ, ಇಂತಹ ಧರ್ಮರಾಜ್ಯವನ್ನು ದಶರಥನು ಸತ್ಯ-ಧರ್ಮಗಳ ಬಲದಿಂದ ಪರಿಪಾಲಿಸುತ್ತಿದ್ದನು. ಇದು ವಾಲ್ಮೀಕಿರಾಮಾಯಣದ ೬ನೆಯ ಸರ್ಗದ ಸಾರವು.


"ಅಮಾತ್ಯಾನಾಂ ಗುಣ-ನೀತೀನಾಂ ವರ್ಣನಮ್" ನಾಮ್ನಃ ಸಪ್ತಮಸರ್ಗಸ್ಯ ಸಾರಃ


(ಸಪ್ತದಶಾಕ್ಷರಾತ್ಮಕಮ್ ಅತ್ಯಷ್ಟಿಶ್ಛನ್ದೋಜಾತಂ ಶಿಖರಿಣೀವೃತ್ತಮ್—"ರಸೈ ರುದ್ರೈಶ್ಛಿನ್ನಾ ಯಮನಸಭಲಾಗಃ ಶಿಖರಿಣೀ")


ವಿಚಾರಾಚಾರೇಷು ಸ್ವಜನವಿಷಯೇ ಶುದ್ಧಗತಯೋ

ಜಿತಾತ್ಮಾನೋ ವಿಜ್ಞಾಃ ಸ್ವಪರವಿಷಯೇ ಕೌಶಲಯುತಾಃ |

ಗತಾಗತ್ಯಾವದ್ಯ ಸುಕರಕರಲಾಭೇ ಸುನಿಯಮಾ 

ಅಮಾತ್ಯಾ ಅಷ್ಟೌ ತೇ ರವಿಪರಿವೃತಾ ರಶ್ಮಿಸದೃಶಾಃ || ೭ ||


"ಅಮಾತ್ಯರ ಗುಣ-ನೀತಿ ವರ್ಣನೆ" ಎಂಬ ೭ನೆಯ ಸರ್ಗದ ಸಾರವು.


(ಭಾಮಿನಿ ಷಟ್ಪದಿ)


ವಿಜಯ ದೃಷ್ಟಿ ಜಯಂತ(ऽ)ಕೋಪರು

ವಿಜಯಶೀಲರು ರಾಷ್ಟ್ರವರ್ಧನ

ತ್ರಿಜಗಕುಶಲ ಸುರಾಷ್ಟ್ರ ಧರ್ಮದ ಪಾಲ ಸೌಮಂತ್ರ |

ನಿಜವಸಿಷ್ಠರು ವಾಮದೇವರು

ತ್ರಿಜಗವಂದ್ಯ ಸುಯಜ್ಞ ಕಾಶ್ಯಪ

ಸು-ಜಾಬಾಲಿ ಮೃಕಂಡುಸುತ ಗೌತಮ ಕತೋದ್ಭವರು || ೭ ||


ದಶರಥಮಹಾರಾಜನಿಗೆ, ಮಂತ್ರಾಲೋಚನಾನಿಪುಣರೂ, ಶುದ್ಧಾಚಾರವಿಚಾರರೂ, ಅರಿಷಡ್ವರ್ಗವರ್ಜಿತರೂ, ಸ್ವಜನಪಕ್ಷಪಾತರಹಿತರೂ, ತಮ್ಮವರ ಹಾಗೂ ಶತ್ರುಗಳ ಕುರಿತು ಚೆನ್ನಾಗಿ ತಿಳಿದವರೂ, ಸಾಮ-ದಾನ-ಭೇದ-ದಂಡಗಳೆಂಬ ಚತುರುಪಾಯ-ಮರ್ಮಜ್ಞರೂ, ಹೊರೆಯಾಗದಂತೆ ಕರವಸೂಲಿಮಾಡುವಲ್ಲಿ ಚತುರರೂ, ನೀತಿಕುಶಲರೂ, ತೇಜಸ್ವಿಗಳೂ, ಕೀರ್ತಿಶಾಲಿಗಳೂ, ಭೂತಭವ್ಯವರ್ತಮಾನವಿಚಾರಜ್ಞರೂ, ಗೂಢಚರ್ಯಾದಿಕುಶಲರೂ ಆದ ದೃಷ್ಟಿ, ಜಯಂತ, ವಿಜಯ, ಸುರಾಷ್ಟ್ರ, ರಾಷ್ಟ್ರವರ್ಧನ, ಅಕೋಪ, ಧರ್ಮಪಾಲ ಹಾಗೂ ಸುಮಂತ್ರ ಎಂಬ ಎಂಟು ಮಂದಿ ಅಮಾತ್ಯರಿದ್ದರು. ಸರ್ವವಂದ್ಯರಾದ ಬ್ರಹ್ಮರ್ಷಿಶ್ರೇಷ್ಠರೂ ಬ್ರಹ್ಮಮಾನಸಪುತ್ರರೂ ಆದ ವಸಿಷ್ಠರೂ, ಬ್ರಹ್ಮರ್ಷಿ ವಾಮದೇವರೂ ಮುಖ್ಯ ಪುರೋಹಿರಾಗಿಯೂ, ಸುಯಜ್ಞ, ಜಾಬಾಲಿ, ಕಾಶ್ಯಪ, ಗೌತಮ, ಮಾರ್ಕಂಡೇಯ ಹಾಗೂ ಕಾತ್ಯಾಯನರು ಸಹ-ಋತ್ವಿಜರೂ ಮಂತ್ರಿಗಳೂ, ಜಿತೇಂದ್ರಿಯರೂ, ಕ್ಷಮಾಶೀಲರೂ, ಪೂರ್ವಭಾಷಿಗಳೂ ಆಗಿದ್ದರು.  ಸೂರ್ಯನು ತನ್ನ ತೇಜೋಮಯ ಕಿರಣಗಳಿಂದ ಜಗತ್ತನ್ನು ಪ್ರಕಾಶಿಸುವಂತೆಯೇ, ದಶರಥರಾಜನು ಆ ತೇಜಸ್ವಿ ಮಂತ್ರಿಗಳಿಂದ ಪರಿವೃತನಾಗಿ ಬಹಳ ಶೋಭಿಸುತ್ತಿದ್ದನು. ಇದು ವಾಲ್ಮೀಕಿರಾಮಾಯಣದ ಬಾಲಕಾಂಡದ ಏಳನೆಯ ಸರ್ಗದ ಸಾರ.


"ಪುತ್ರಪ್ರಾಪ್ತ್ಯರ್ಥಂ ದಶರಥೇನ ಅಶ್ವಮೇಧಯಾಗಾನುಷ್ಠಾನಾಭಿಪ್ರಾಯನಿವೇದನಮ್, ಬ್ರಾಹ್ಮಣೈಃ ತದನುಮೋದನಮ್, ತತ್ಸಂಭಾರಸಂಭರಣಾದಿಪ್ರವೃತ್ತಿಃ" ನಾಮ್ನಃ, ಅಷ್ಟಮಸರ್ಗಸ್ಯ ಸಾರಃ


(ಅಷ್ಟಾಕ್ಷರಾತ್ಮಕಮ್ ಅನುಷ್ಟುಪ್-ಛನ್ದೋಜಾತಮ್ ಅನುಷ್ಠುಪ್-ವೃತ್ತಮ್—"ಪಂಚಮಂ ಲಘು ಸರ್ವತ್ರ ಸಪ್ತಮಂ ದ್ವಿಚತುರ್ಥಯೋಃ | ಗುರುಷಷ್ಠಂ ಚ ಪಾದಾನಾಂ ಚತುರ್ಣಾಂ ಸ್ಯಾದನುಷ್ಟುಭಿ ||")


ವಂಶಕೃತ್ಪ್ರಾಪ್ತಯೇ ರಾಜ್ಞಾ ವಾಜಿಮೇಧೋ ನಿವೇದಿತಃ |

ಓಮಿತ್ಯುಕ್ತಂ ಬ್ರಾಹ್ಮಣೈಶ್ಚಾಮಾತ್ಯಾಃ ಸಂಭರಣೇ ಹಿತಾಃ || ೮ ||


"ಪುತ್ರಪ್ರಾಪ್ತಿಗಾಗಿ ದಶರಥನಿಂದ ಅಶ್ವಮೇಧಯಾಗಾನುಷ್ಠಾನಾಭಿಪ್ರಾಯನಿವೇದನೆ, ಬ್ರಾಹ್ಮಣರಿಂದ ಅದಕ್ಕೆ ಅನುಮತಿ ಹಾಗೂ ಮಂತ್ರಿಗಳಿಂದ ಯಜ್ಞಸಿದ್ಧತೆಯಲ್ಲಿ ಪ್ರವರ್ತನೆ" ಎಂಬ ೮ನೆಯ ಸರ್ಗದ ಸಾರವು.


ದಶರಥನು ಕುಲವೃದ್ಧಿಗೋಸುಗ

ದಶವಿಧದಿ ಯೋಚಿಸುತಲಶ್ವವ

ದಶದಿಶೆಗೆ ಕಳುಹಿಸುವ ಯಾಗವ ತಾ ನಿವೇದಿಸಿದ |

ದಶದಿಶೆಯ ಬ್ರಾಹ್ಮಣರ ಸಮ್ಮತಿ

ದಶರಥನು ಪಡಕೊಂಡು ಸಚಿವರ

ದಶವಿಧದಿ ತೊಡಗಿಸಿದ ಸರಯೂತೀರದುತ್ತರಕೆ || ೮ ||


ದಶರಥ ಮಹಾರಾಜನು ವಂಶವನ್ನು ಮುಂದುವರಿಸಲು ತನಗೆ ಪುತ್ರರಿಲ್ಲವೆಂಬ ಕಕ್ಕುಲತೆಯಿಂದ ಯೋಚಿಸಿ, ಅದಕ್ಕಾಗಿ ಅಶ್ವಮೇಧಯಾಗವನ್ನು ಮಾಡಬೇಕೆಂದು ನಿಶ್ಚಯಿಸಿ ವಸಿಷ್ಠಾದಿ ಬ್ರಹ್ಮರ್ಷಿಗಳಲ್ಲಿ ತನ್ನ ಮನದಿಂಗಿತವನ್ನು ನಿವೇದಿಸಿಕೊಂಡನು. ಆಗ ಅವರೆಲ್ಲರೂ ಸಂತೋಷದಿಂದ ಅನುಮತಿಸಲು, ರಾಜನೂ ಸಂತುಷ್ಟನಾಗಿ ಸುಮಂತ್ರಾದಿ ತನ್ನ ಅಮಾತ್ಯರಿಗೆ ಸರಯೂ ನದಿಯ ಉತ್ತರತೀರದಲ್ಲಿ ವಿಧಿವತ್ತಾಗಿ ನಡೆಸಲಿರುವ ಈ ಯಜ್ಞಕ್ಕಾಗಿ ತಕ್ಕ ಸಿದ್ಧತೆಯನ್ನೂ, ಯಜ್ಞಕ್ಕೆ ಬೇಕಾದ ಸಂಭಾರಗಳ ಸಂಗ್ರಹಣೆಯನ್ನೂ, ದಶದಿಕ್ಕುಗಳಿಗೂ ಬಿಡಲು ಯಜ್ಞಾಶ್ವವನ್ನೂ ಸಿದ್ಧಗೊಳಿಸಲು ಸಮ್ಮಾನಪೂರ್ವಕವಾಗಿ ಪ್ರಚೋದಿಸಿದನು. ಬಳಿಕ ತನ್ನ ಪತ್ನಿಯರಾದ ಕೌಸಲ್ಯಾ, ಸುಮಿತ್ರಾ, ಕೈಕೇಯಿಯರಲ್ಲೂ ಈ ವಿಚಾರವನ್ನು ನುಡಿದು, ಅವರಲ್ಲೂ ಆನಂದವನ್ನುಂಟುಮಾಡಿದನು. ಇದು ವಾಲ್ಮೀಕಿರಾಮಾಯಣದ ಬಾಲಕಾಂಡದ ೮ನೆಯ ಸರ್ಗದ ಸಾರ.


Comments

Popular posts from this blog

ಶ್ರೀಗುರುದೇವದತ್ತಚರಿತಸಾರಃ ೧

ಶ್ರೀಮದ್ರಾಮಾಯಣಾಮೃತಮ್ ೧