ಶ್ರೀಮದ್ರಾಮಾಯಣಾಮೃತಮ್ ೧
ಶ್ರೀಮದ್ರಾಮಾಯಣಾಮೃತಮ್ ೧
(ವಿವಿಧ ರಾಮಾಯಣಗಳ ತುಲನಾತ್ಮಕ ಸ್ವಾಧ್ಯಾಯ, ಏಕಶ್ಲೋಕೀರಾಮಾಯಣಮ್, ವಾಲ್ಮೀಕೀಯ-ಸಂಕ್ಷೇಪರಾಮಾಯಣಮ್, ವಾಲ್ಮೀಕೀಯ-ರಾಮಾಯಣಕಥಾಸಾರಾಂಶಃ, ಗಾಯತ್ರೀರಾಮಾಯಣಮ್, ಭಜನ (/ನಾಮ) ರಾಮಾಯಣಮ್, ಕಾಂಡರಾಮಾಯಣಮ್ ಹಾಗೂ ಸರ್ಗರಾಮಾಯಣಮ್)
|| ಶ್ರೀ ಗುರುಗಣೇಶಾಭ್ಯಾಂ ನಮಃ ||
|| ಶ್ರೀಸರಸ್ವತ್ಯೈ ನಮಃ ||
|| ಸ್ವಸ್ತಿ ಶ್ರೀ ಉಮಾಮಹೇಶ್ವರಃ ಪ್ರಸನ್ನಃ ||
|| ಪ್ರಸೀದತು ಶ್ರೀಹನೂಮತ್ಸಮೇತಃ ಸೀತಾರಾಮಚನ್ದ್ರಃ ||
|| ಓಂ ನಮೋ ನಾರಾಯಣಾಯ ||
ಪೀಠಿಕೆ
ರಾಮಾಯಣ ಮತ್ತು ಮಹಾಭಾರತಗಳು ಭಾರತದೇಶದ ೨ ಪ್ರಧಾನ ಐತಿಹಾಸಿಕ ಗ್ರಂಥಗಳು. ಇವುಗಳ ಅಧ್ಯಯನವು ನಮಗೆ, ಆ ಕಾಲದ ಭಾರತದ ಚರಿತ್ರೆ, ಸನಾತನ ಭಾರತೀಯ ಸಂಸ್ಕೃತಿಯ ಪರಿಚಯ ಹಾಗೂ ನಾನಾ ಧರ್ಮಸೂಕ್ಷ್ಮಾದಿಗಳ ವಿಸ್ತಾರವಾದ ಮಾಹಿತಿಯನ್ನು ನೀಡುತ್ತದೆ.
*“ಗೀತೇ ರಾಮಾಯಣೇ ಪುಣ್ಯೇ ಪುರಾಣೇ ಭಾರತೇ ತಥಾ |
ಆದೌ ಅನ್ತೇ ಚ ಮಧ್ಯೇ ಚ ಹರಿಃ ಸರ್ವತ್ರ ಗೀಯತೇ ||”*
ಎಂಬ ಮಾತಿನಂತೆ, ಭಗವದ್ಗೀತೆ, ಸಂಗೀತ ಕೀರ್ತನಾದಿಗಳು, ರಾಮಾಯಣ, ಪುರಾಣಗಳು ಹಾಗೂ ಮಹಾಭಾರತ— ಇಂತಹ ಗ್ರಂಥಗಳಲ್ಲಿ ಆದಿ-ಮಧ್ಯ-ಅಂತ್ಯಗಳಲ್ಲೆಲ್ಲ ಭಗವಂತನೇ ಸ್ತುತಿಸಲ್ಪಟ್ಟಿರುವನು; ಆ ದಿವ್ಯಶಕ್ತಿಯ ಮಹಿಮೆಗಳೇ ಕೀರ್ತಿತವಾಗಿವೆ. ವರುಣ / ಪ್ರಚೇತಸ್ ಹಾಗೂ ಚರ್ಷಣೀ ದಂಪತಿಗಳ ಪುತ್ರರಾಗಿ ಪ್ರಾಚೇತಸರೆನಿಸಿದ ಆದಿಕವಿ ವಾಲ್ಮೀಕಿಮಹರ್ಷಿಗಳು ಬ್ರಹ್ಮ-ನಾರದಾದಿಗಳ ಅನುಗ್ರಹದಿಂದ, ವ್ಯಾಧನೊಬ್ಬನು ಕ್ರೌಂಚಮಿಥುನದಲ್ಲಿ ಗಂಡು ಕ್ರೌಂಚವನ್ನು ಹೊಡೆದುರುಳಿಸಿದ್ದನ್ನು ನೋಡಿ ಶೋಕದಿಂದ *“ಶೋಕಃ ಶ್ಲೋಕತ್ವಮಾಗತಃ”* ಎಂಬಂತೆ, ದುಃಖಭಾವದಲ್ಲಿ ಜಗತ್ತಿನ ಮೊದಲ ಛಂದೋಬದ್ಧವಾದ ಲೌಕಿಕಸಂಸ್ಕೃತಶ್ಲೋಕವೊಂದನ್ನು ಅನುಷ್ಟುಪ್ ಛಂದಸ್ಸಿನಲ್ಲಿ *(ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||)* ಉದ್ಗರಿಸಿ, ಬಳಿಕ ಶ್ರೀರಾಮಚಂದ್ರನ ವಿಮಲಚರಿತವನ್ನು ಶ್ರೀಮದ್ರಾಮಾಯಣವೆಂಬ ೨೪,೦೦೦ ಶ್ಲೋಕಗಳ ಉದ್ಗ್ರಂಥರೂಪದಲ್ಲಿ ವಿರಚಿಸಿ, ಜಗತ್ತನ್ನೇ ಅನುಗ್ರಹಿಸಿದರು. *“ಏವಮೇತತ್ ಪುರಾವೃತ್ತಮ್ ಆಖ್ಯಾನಂ ಭದ್ರಮ್ ಅಸ್ತು ವಃ”, “ಆದಿಕಾವ್ಯಮಿದಂ ಪ್ರೋಕ್ತಂ ಪುರಾ ವಾಲ್ಮೀಕಿನಾ ಕೃತಮ್”*— ಇತ್ಯಾದಿ ರಾಮಾಯಣದ ಕುರಿತ ಹೇಳಿಕೆಗಳಿಂದ ಇದು ಕಾವ್ಯವೂ ಹೌದು, ಇತಿಹಾಸವೂ ಹೌದೆಂದು ತಿಳಿದುಬರುತ್ತದೆ. *“ವೇದಃ ಪ್ರಾಚೇತಸಾದಾಸೀತ್ ಸಾಕ್ಷಾದ್ರಾಮಾಯಣಾತ್ಮನಾ”, “ತತಃ ಪಶ್ಯತಿ ಧರ್ಮಾತ್ಮಾ ತತ್ಸರ್ವಂ ಯೋಗಮಾಸ್ಥಿತಃ”* ಎಂಬ ಮಾತುಗಳಂತೆ, ರಾಮಾಯಣವು ವೇದತುಲ್ಯವೂ, ತಪೋಮುಖೇನ ಋಷಿದೃಷ್ಟವೂ ಆಗಿದ್ದು, ಕೇವಲ ಸಾಮಾನ್ಯ ಕವಿಕಲ್ಪಿತರಚನೆಯಲ್ಲ. ರಾಮಾಯಣವು ವಾಮನಮೂರ್ತಿಯಾದರೆ, ಮಹಾಭಾರತವು ತ್ರಿವಿಕ್ರಮರೂಪ. ಆದರೂ, ಇವೆರಡೂ ಒಬ್ಬ ಮಹಾವಿಷ್ಣುವಿನದೇ ವಿಭಿನ್ನ ಅವತಾರಗಳಾಗಿರುವಂತೆಯೇ, ಇವೆರಡೂ ಐತಿಹಾಸಿಕಕಾವ್ಯಗಳೂ ಒಂದೇ ಸನಾತನ ಸಂಸ್ಕೃತಿಗೆ ಹಿಡಿದ ೨ ಕೈಗನ್ನಡಿಗಳು; ಭಾರತೀಯತೆಯ ೨ ಕಣ್ಣುಗಳು.
*ಆದಿಕವಿ ಮಹರ್ಷಿ ವಾಲ್ಮೀಕಿ*
_ಭೃಗುವಂಶದಲ್ಲಿ ಜನಿಸಿದ ಇವರು ಬಾಲ್ಯದಲ್ಲೇ ಹೆತ್ತವರಿಂದ ಕೈತಪ್ಪಿ ಕಾಡಿನಲ್ಲಿ ಬೇಡರ ಗುಂಪಿನಲ್ಲಿ ಸೇರಿಕೊಂಡು “ ರೂಕ್ಷ ” ನೆಂಬ ಹೆಸರಿನಿಂದ ಕ್ರೂರಿಯಾಗಿ ಬೆಳೆದರು. ಇವರು ಸಪ್ತರ್ಷಿಗಳ ಕೃಪೆಯಿಂದ ರಾಮಮಂತ್ರವನ್ನು ನಿರಂತರ ಜಪಿಸಿ ಇವರ ಸುತ್ತ ಹುತ್ತ (ವಲ್ಮೀಕ) ಬೆಳೆದುದರಿಂದ ವಾಲ್ಮೀಕಿಯೆನಿಸಿದರು. ಆ ಹುತ್ತವು ಪ್ರಚೇತಸ್ / ವರುಣನಿಂದ ವರ್ಷಧಾರೆಯ ಮೂಲಕ ಕಳೆಯಲ್ಪಟ್ಟು ವಾಲ್ಮೀಕಿಗಳು ಪ್ರಾಚೇತಸರೆನಿಸಿದರೆಂಬ ಪ್ರತೀತಿಯೂ ಇದೆ. ಅಲ್ಲದೆ, ಭೃಗುವೂ ವರುಣವಂಶಜನಾದ್ದರಿಂದ, ಅದೇ ಕುಲದಲ್ಲಿ ವಾಲ್ಮೀಕಿಗಳೂ ಜನಿಸಿದ್ದರಿಂದ ಪ್ರಾಚೇತಸರೆನಿಸಿದರು._
*ಶ್ರೀರಾಮನ ದೈವತ್ವ*
ರಾಮಾಯಣವು ಕರುಣರಸಪ್ರಧಾನವಾಗಿದ್ದು, ನವರಸಪರಿಪುಷ್ಟವಾದ ಮಹಾಕಾವ್ಯ. ನಿರಾಕಾರನೂ, ನಿರ್ಗುಣನೂ ಆದ ಪರಬ್ರಹ್ಮನೇ *“ರಾಮೋ ವಿಗ್ರಹವಾನ್ ಧರ್ಮಃ”, “ವಿದ್ಧಿ ಮಾಂ ಋಷಿಭಿಃ ತುಲ್ಯಂ ಕೇವಲಂ ಧರ್ಮಮ್ ಆಸ್ಥಿತಮ್”* ಎಂಬಂತೆ ಋಷಿಸದೃಶನಾಗಿ ಧರ್ಮವೇ ಮೂರ್ತಿವೆತ್ತಂತೆ ಶ್ರೀರಾಮಚಂದ್ರನಾಗಿ ಅವತರಿಸಿದನು. ಹೀಗೆ ಆ ಭಗವಂತನ ಮಾನುಷಾವತಾರದ ಲೀಲಾವಿಭೂತಿಯ ವಾಙ್ಮಯಪ್ರಸ್ತುತಿಯೇ ಶ್ರೀಮದ್ರಾಮಾಯಣ.
*“ವಿಷ್ಣೋ ಪುತ್ರತ್ವಮಾಗಚ್ಛ ಕೃತ್ವಾऽऽತ್ಮಾನಂ ಚತುರ್ವಿಧಮ್”* — _“ಹೇವಿಷ್ಣುವೇ! ನಿನ್ನ ನಾಲ್ಕು ಅಂಶಗಳಿಂದ ನನ್ನ ಪುತ್ರತ್ವವನ್ನು ನೀನು ಹೊಂದು”_ (ಬಾಲಕಾಂಡ), “ *“ಅರ್ಥಿತೋ ಮಾನುಷೇ ಲೋಕೇ ಜಜ್ಞೇ ವಿಷ್ಣುಸ್ಸನಾತನಃ”* — _“ಸನಾತನನಾದ ವಿಷ್ಣುವು ದೇವತೆಗಳಿಂದ ಹಾಗೂ ದಶರಥನಿಂದ ಪ್ರಾರ್ಥಿತನಾಗಿ ಈ ಮನುಷ್ಯಲೋಕದಲ್ಲಿ ಜನಿಸಿದನು.”_ (ಅಯೋಧ್ಯಾಕಾಂಡ), *“ಪ್ರೀಯತೇ ಸತತಂ ರಾಮಃ ಸ ಹಿ ವಿಷ್ಣುಃ ಸನಾತನಃ”* — ಶ್ರೀರಾಮನು ಸತತವೂ ಪ್ರೀತಿಸಲ್ಪಡುತ್ತಾನೆ. ಯಾಕೆಂದರೆ, ಆತನೇ ಸನಾತನನಾದ ವಿಷ್ಣುವು.”_ (ಯುದ್ಧಕಾಂಡ)— ಈ ಎಲ್ಲಾ ರಾಮಾಯಣದ ವಾಕ್ಯಗಳು ಶ್ರೀರಾಮನು ಮಹಾವಿಷ್ಣುವಿನ ಅವತಾರವೆಂಬುದಕ್ಕೆ ಆಧಾರಗಳು. *“ಯೋ ಜಾತಮಸ್ಯ ಮಹತೋ ಮಹಿಬ್ರವಾತ್”* — _“ಆತನ ಮಹಿಮೆಯಿಂದಲೇ ಆತನು ಹುಟ್ಟುತ್ತಾನೆ”_ , *“ಪರಮಚ್ಛದೋ ವರ ಆವಿವೇಶ”* — _“ಮಹಾ ಮಾಯಾವಿಯಾದ ಪರಮಾತ್ಮನು ಅವತಾರರೂಪದಿಂದ ಶ್ರೇಷ್ಠರೀತಿಯಿಂದ ಜಗವನ್ನು ಪ್ರವೇಶಿಸಿದನು.”_ — ಎಂಬ ವೇದಮಂತ್ರಗಳು ಭಗವಂತನು ಅವತಾರವೆತ್ತುತ್ತಾನೆಂಬುದಕ್ಕೆ ಪ್ರಮಾಣಗಳು. ರಾಮಾಯಣದಲ್ಲಿ ಹಾಗೂ ಇತರ ಹಲವು ಪುರಾಣಗಳ ಹಲವಾರು ಕಡೆಗಳಲ್ಲಿ ಶ್ರೀರಾಮನು ಪರಬ್ರಹ್ಮಸ್ವರೂಪನೆಂಬುದಕ್ಕೆ ಸಾಕಷ್ಟು ಆಧಾರಗಳಿವೆ.
*ರಾಮಾಯಣದಲ್ಲಿ ನವರಸಗಳು*
*ಶೃಙ್ಗಾರಂ ಕ್ಷಿತಿನನ್ದಿನೀವಿಹರಣೇ ವೀರಂ ಧನುರ್ಭಞ್ಜನೇ |*
*ಕಾರುಣ್ಯಂ ಬಲಿಭುಙ್ಮುಖೇऽದ್ಭುತರಸಂ ಸಿನ್ಧೌ ಗಿರಿಸ್ಥಾಪನೇ ||*
*ಹಾಸ್ಯಂ ಶೂರ್ಪಣಖಾಮುಖೇ ಭಯವಹೇ ಭೀಭತ್ಸಮಾಜೇರ್ಮುಖೇ |*
*ರೌದ್ರಂ ರಾವಣಭಞ್ಜನೇ ಮುನಿಜನೇ ಶಾನ್ತಂ ವಪುಃ ಪಾತು ನಃ ||*
_ಭೂಜಾತೆಯಾದ ಪತ್ನಿ ಸೀತೆಯೊಂದಿಗೆ ವಿಹರಿಸುವಾಗ ಶೃಂಗಾರರಸವನ್ನೂ, ಶಿವಧನುಸ್ಸನ್ನು ಜನಕನ ಆಸ್ಥಾನದಲ್ಲಿ ಭಂಗಿಸಿದಾಗ ವೀರರಸವನ್ನೂ, ಪಿತೃಗಳಿಗೆ ಇಡುವ ಬಲಿ / ಊಟವನ್ನುಣ್ಣುವ ಕಾಗೆಯ ರೂಪದಲ್ಲಿದ್ದ ಕಾಕಾಸುರನ ಬಗ್ಗೆ ಕರುಣರಸವನ್ನೂ, ಸೇತುಬಂಧನದಲ್ಲಿ ಅದ್ಭುತರಸವನ್ನೂ, ಶೂರ್ಪಣಖೆಯ ವಿಷಯದಲ್ಲಿ ಹಾಸ್ಯರಸವನ್ನೂ, ಭಯಜನಕವಾದ, ಭಯಾನಕವಾದ ಯುದ್ಧರಂಗದಲ್ಲಿ ಭೀಭತ್ಸವನ್ನೂ, ರಾವಣವಧೆಯಲ್ಲಿ ರೌದ್ರರಸವನ್ನೂ, ಋಷಿಮುನಿಗಳ ಹೃದಯದಲ್ಲಿ ಶಾಂತರಸವನ್ನೂ ತೋರಿದ ಶರಣಾಗತರಿಗೆ ಅಭಯಪ್ರದನಾದ ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನು ನಮ್ಮನ್ನು ಪಾಲಿಸಲಿ._
*ರಾಮಾಯಣವೈವಿಧ್ಯ / ಶತಕೋಟಿರಾಮಾಯಣ*
ರಾಮಾಯಣವು ಮೂಲದಲ್ಲಿ ವಾಲ್ಮೀಕಿನಿರ್ಮಿತವಾಗಿದ್ದರೂ, ಬಳಿಕ ಸಂಸ್ಕೃತಭಾಷೆಯಲ್ಲಿ ಅಧ್ಯಾತ್ಮರಾಮಾಯಣ, ವಾಸಿಷ್ಠರಾಮಾಯಣ, ಅಗಸ್ತ್ಯರಾಮಾಯಣ, ಆನಂದರಾಮಾಯಣ, ಅದ್ಭುತರಾಮಾಯಣ, ಸಪ್ತರ್ಷಿರಾಮಾಯಣ, ಗಾಯತ್ರೀರಾಮಾಯಣ ಮುಂತಾದ ಹಾಗೂ ಪ್ರಾದೇಶಿಕಭಾಷೆಗಳಲ್ಲಿ ಕಂಬರಾಮಾಯಣ, ತುಲಸೀರಾಮಾಯಣ, ಕೃತ್ತಿವಾಸರಾಮಾಯಣ, ರಂಗನಾಥರಾಮಾಯಣ, ತೊರವೆರಾಮಾಯಣ, ಜನಪ್ರಿಯರಾಮಾಯಣ, ಜನಪದರಾಮಾಯಣ, ಸಂಗ್ರಹರಾಮಾಯಣ, ಕೌಶಿಕರಾಮಾಯಣ, ಕುಮುದೇಂದುರಾಮಾಯಣ, ಚಿತ್ರರಾಮಾಯಣ, ನವನೀತರಾಮಾಯಣ, ವಾಲ್ಮೀಕಿ ವಚನರಾಮಾಯಣ, ರಾಮಾಯಣದರ್ಶನಂ, ರಾಮಾಯಣಮಹಾನ್ವೇಷಣಂ, ತೌಳವರಾಮಾಯಣ, ಸೀತಾಯನ, ಜೈನರಾಮಾಯಣ, ಬೌದ್ಧರಾಮಾಯಣ ಮುಂತಾದ ನಾನಾ ರಾಮಾಯಣಗಳು ವಿರಚಿತವಾದವು. ಮೂಲ ವಾಲ್ಮೀಕಿರಾಮಾಯಣಕ್ಕೆ ನೂರಾರು ವ್ಯಾಖ್ಯಾನಗಳು ಬಂದವು. ವಾಲ್ಮೀಕಿರಾಮಾಯಣವನ್ನಾಧರಿಸಿ ಕವಿರತ್ನ ಕಾಳಿದಾಸನ ರಘುವಂಶ-ಮೇಘದೂತಗಳು, ಮಹಾಕವಿ ಭಾಸನ ಪ್ರತಿಮಾ-ಅಭಿಷೇಕ ನಾಟಕಗಳು, ಭವಭೂತಿಯ ಉತ್ತರರಾಮಚರಿತ, ಮುರಾರಿಯ ಅನರ್ಘರಾಘವ, ವಿದರ್ಭರಾಜನಾದ ಭೋಜನ ರಾಮಾಯಣಚಂಪೂ, ಶ್ರೀವೇಂಕಟನಾಥರ ಹಂಸಸಂದೇಶ ಇತ್ಯಾದಿ ಹಲವಾರು ಕೃತಿಗಳು ವಿರಚಿಸಲ್ಪಟ್ಟವು. ಹೀಗೆ ವಾಲ್ಮೀಕಿರಾಮಾಯಣವು, *“ಕಾವ್ಯಬೀಜಂ ಸನಾತನಮ್”* ಎಂಬ (ಬೃಹದ್ಧರ್ಮಪುರಾಣ ೧/೩೦/೪೭) ಮಾತಿನಂತೆ ಅನೇಕ ಸಾಹಿತ್ಯಕೃತಿಗಳ ಮೂಲಾಧಾರವಾಗಿ ವಿಶ್ವಕಾವ್ಯವೆನಿಸಿದೆ.
*ರಾಮಾಯಣ ಮತ್ತು ತಪಸ್ಸು*
ರಾಮಾಯಣದ ಮಹತ್ವವು ತಪೋಮೂಲವಾದುದು. *“ತಪಸ್ಸ್ವಾಧ್ಯಾಯನಿರತಂ”* — ತಪಸ್ಸಿನಿಂದಲೇ ವಾಲ್ಮೀಕಿಮಹರ್ಷಿಗಳಿಗೆ ರಾಮಾಯಣವು ಸಿದ್ಧಿಸಿತೆಂದು ರಾಮಾಯಣದ ಮೊದಲ ಶ್ಲೋಕವೇ ಹೇಳಿದೆ. ಮುಂದೆ, ವಿಶ್ವಾಮಿತ್ರರ ತಪಸ್ಸು, ಗಂಗಾವತರಣಕ್ಕಾಗಿ ಭಗೀರಥನ ತಪಸ್ಸು, ಚೂಲಿ ಋಷಿ ಹಾಗೂ ಭೃಗುಮುನಿಗಳ ತಪಸ್ಸು ಮುಂತಾದವು ಬರುತ್ತವೆ. ರಾಮಾಯಣದ ಪ್ರಕಾರ ಸ್ವರ್ಗಾದಿ ಸಕಲ ಸುಖಭೋಗಗಳ ಮೂಲವು ತಪಸ್ಸೇ ಆಗಿರುವುದು. ರಾವಣನ ಮಹಾಬಲವೂ, ಸಕಲ ಸಾಮ್ರಾಜ್ಯಾದಿಭೋಗಗಳೂ ಆತನ ತಪಸ್ಸಾಧಿತವೇ ಆಗಿವೆ. ಶ್ರೀರಾಮನೂ ಶುದ್ಧ ರಾಜರ್ಷಿಯೇ ಎಂಬುದಕ್ಕೆ ಆತನ *“ವಿದ್ಧಿ ಮಾಂ ಋಷಿಭಿಃ ತುಲ್ಯಮ್”* ಎಂಬ ಮಾತೇ ಸಾಕ್ಷಿ. ರಾಮನು ವನವಾಸದಲ್ಲಿ ಅನೇಕ ಋಷ್ಯಾಶ್ರಮಗಳನ್ನು ಸಂದರ್ಶಿಸುತ್ತಾನೆ. ಅಲ್ಲಿ ಆತನು ನಾನಾ ಋಷಿಮುನಿಗಳನ್ನು ಭೇಟಿಯಾಗುತ್ತಾನೆ. ಅವರ ಕುರಿತ ಪ್ರಸ್ತಾಪ ಅರಣ್ಯಕಾಂಡದ ೬ನೆಯ ಸರ್ಗದಲ್ಲಿ ಹೀಗಿದೆ—
*ವೈಖಾನಸಾ ವಾಲಖಿಲ್ಯಾಃ ಸಂಪ್ರಕ್ಷಾಲಾ ಮರೀಚಿಪಾಃ |*
*ಅಶ್ಮಕುಟ್ಟಾಶ್ಚ ಬಹವಃ ಪತ್ರಾಹಾರಾಶ್ಚ ತಾಪಸಾಃ ||*
*ದನ್ತೋಲೂಖಲಿನಶ್ಚೈವ ತಥೈವೋನ್ಮಜ್ಜಕಾಃ ಪರೇ |*
*ಗಾತ್ರಶಯ್ಯಾ ಆಶಯ್ಯಾಶ್ಚ ತಥೈವಾನವಕಾಶಿಕಾಃ ||*
ಮುನಯಃ ಸಲಿಲಾಹಾರಾ ವಾಯುಭಕ್ಷಾಸ್ತಥಾಪರೇ |*
*ಆಕಾಶನಿಲಯಾಶ್ಚೈವ ತಥಾ ಸ್ಥಂಡಿಲಶಾಯಿನಃ ||*
*ತಥೋರ್ಧ್ವವಾಸಿನೋ ದಾನ್ತಾಸ್ತಥಾऽऽರ್ದ್ರಪಟವಾಸಸಃ |*
*ಸಜಪಾಶ್ಚ ತಪೋನಿಷ್ಠಾಸ್ತಥಾ ಪಞ್ಚತಪೋನ್ವಿತಾಃ ||*
*ಸರ್ವೇ ಬ್ರಾಹ್ಮಶ್ರಿಯಾಯುಕ್ತಾ ದೃಢಯೋಗಸಮಾಹಿತಾಃ |*
*ಶರಭಂಗಾಶ್ರಮೇ ರಾಮಮಭಿಜಗ್ಮುಶ್ಚ ತಾಪಸಾಃ ||*
(ಶ್ಲೋಕ ೨-೬)
*೧) ವೈಖಾನಸರು—* “ಯೇ ನಖಾಃ ತೇ ವೈಖಾನಸಾಃ”— ಯಾರು ಪರಮಪುರುಷನ ನಖ / ಉಗುರಿನಂತಹ ಅವಯವಗಳಿಂದ ಜನಿಸಿದರೋ ಅವರು ವೈಖಾನಸರು ಎಂದಿದೆ ಕೃಷ್ಣಯಜುರ್ವೇದೀಯ ತೈತ್ತಿರೀಯಾರಣ್ಯಕ ೧ /೨೩. “ವಿಖನಸಂ ಬ್ರಹ್ಮಾಣಂ ವಿದುಃ ತಪಸಾ ಇತಿ ವೈಖಾನಸಾಃ”— ವಿಖನಸ್ ಎಂದರೆ ಪರಬ್ರಹ್ಮ. ಆ ಪರಬ್ರಹ್ಮವನ್ನು ಯಾರು ತಪೋಮುಖೇನ ತಿಳಿದಿರುವರೋ ಅವರು ವೈಖಾನಸರು. ವಾನಪ್ರಸ್ಥರು ಎಂಬರ್ಥವೂ ಇದೆ.
*೨) ವಾಲಖಿಲ್ಯರು ―* “ಯೇ ವಾಲಾಃ ತೇ ವಾಲಖಿಲ್ಯಾಃ”― ಯಾರು ಪ್ರಜಾಪತಿಯ ರೋಮಗಳಂಥ ಅವಯವಗಳಿಂದುದಿಸಿದರೋ ಅವರು ವಾಲಖಿಲ್ಯರು (ಕೃ.ಯ.ತೈ.ಆ. ೧ / ೨೩).
*೩) ಸಂಪ್ರಕ್ಷಾಲರು—* ಸರ್ವದಾ ಶರೀರವನ್ನು ಪ್ರಕ್ಷಾಲನೆ ಮಾಡಿಕೊಳ್ಳುತ್ತಿದ್ದವರು / ತೊಳೆದುಕೊಳ್ಳುತ್ತಿದ್ದವರು / ಸ್ನಾನನಿರತರು.
*೪) ಮರೀಚಿಪರು—* ಸೂರ್ಯಚಂದ್ರರ ಕಿರಣಗಳನ್ನು ಮಾತ್ರ ಪಾನಮಾಡಿಕೊಂಡು ತಪೋನಿರತರು.
*೫) ಅಶ್ಮಕುಟ್ಟರು—* ಕಲ್ಲಿನಿಂದ ಕುಟ್ಟಿದ ಆಹಾರವನ್ನು ಮಾತ್ರ ಸೇವಿಸುವವರು.
*೬) ಪತ್ರಾಹಾರರು—* ಕೇವಲ ತರಗೆಲೆಗಳನ್ನೇ ಸೇವಿಸಿ ತಪ ಗೈಯುವವರು.
*೭) ದಂತೋಲೂಖಲಿಗಳು—* ಉಲೂಖಲವೆಂದರೆ ಧಾನ್ಯಾದಿಗಳನ್ನು ಕುಟ್ಟುವ, ಮರದ ಸಾಧನ, ಒನಕೆ / ಪಾತ್ರೆ. ತಮ್ಮ ದಂತ / ಹಲ್ಲು ಗಳನ್ನೇ ಹಸಿಧಾನ್ಯಗಳನ್ನು ಕುಟ್ಟುವ ಸಾಧನ / ಪಾತ್ರೆಯನ್ನಾಗಿಸಿಕೊಂಡ ತಪಸ್ವಿಗಳು.
*೮) ಉನ್ಮಜ್ಜಕರು—* ಕುತ್ತಿಗೆಯವರೆಗೆ ನೀರಲ್ಲಿ ಮುಳುಗಿ ತಪಗೈಯುವವರು.
*೯) ಗಾತ್ರಶಯ್ಯರು—* ಕುಳಿತೇ ನಿದ್ರಿಸುವಂಥ ತಪಸ್ವಿಗಳು.
*೧೦) ಅಶಯ್ಯರು—* ಎಂದೂ ನಿದ್ರಿಸದವರು.
*೧೧) ಅನವಕಾಶಿಕರು—* ನಿರಂತರ ಸತ್ಕರ್ಮನಿರತಾಗಿದ್ದುದರಿಂದ ಎಂದೂ ಸಮಯಾವಕಾಶ / ಬಿಡುವೇ ಇಲ್ಲದವರು.
*೧೨) ಸಲಿಲಾಹಾರರು—* ಸಲಿಲ / ನೀರು ಮಾತ್ರವನ್ನು ಕುಡಿದು ಬದುಕುವವರು.
*೧೩) ವಾಯುಭಕ್ಷರು—* ಗಾಳಿಮಾತ್ರವನ್ನು ಸೇವಿಸಿ ಜೀವಿಸುವವರು.
*೧೪) ಆಕಾಶನಿಲಯರು—* ತೆರೆದ ಬಯಲಿನಲ್ಲೇ / ಮರದ ಮೇಲೆಯೇ ವಾಸವಾಗಿರುವವರು.
*೧೫) ಸ್ಥಂಡಿಲಶಾಯಿಗಳು—* ಯಜ್ಞಭೂಮಿಯಲ್ಲೇ ಮಲಗುವವರು.
*೧೬) ಊರ್ಧ್ವವಾಸಿಗಳು—* ಪರ್ವತಶಿಖರವೇ ಮುಂತಾದ ಉನ್ನತಸ್ಥಾನಗಳಲ್ಲಿ ವಾಸಿಸುವವರು.
*೧೭) ದಾಂತರು—* ಇಂದ್ರಿಯಗಳ ದಮನ / ನಿಗ್ರಹ ಮಾಡಿ ದಮವುಳ್ಳವರು. (ದಮ— ಇಂದ್ರಿಯನಿಗ್ರಹ, ಶಮ— ಮನೋನಿಗ್ರಹ)
*೧೮) ಆರ್ದ್ರಪಟವಾಸಸರು—* ಸದಾ ಒದ್ದೆ ಬಟ್ಟೆಯನ್ನೇ ಧರಿಸುವವರು.
*೧೯) ಸಜಪರು—* ನಿರಂತರ ಜಪನಿರತರು.
*೨೦) ತಪೋನಿಷ್ಠರು—* ತಪಸ್ಸು / ಪರಮಾತ್ಮವಿಚಾರದಲ್ಲೇ ಇರುವವರು.
*೨೧) ಪಂಚತಪೋನ್ವಿತರು—* ಬೇಸಿಗೆಯಲ್ಲಿ ಮೇಲಿನಿಂದ ಸೂರ್ಯತಾಪ, ಉಳಿದ ೪ ಕಡೆಗಳಿಂದ ಅಗ್ನಿಯ ತಾಪವನ್ನು ಸಹಿಸಿ ತಪಗೈಯುವ *ಪಂಚಾಗ್ನಿಸೇವಿಗಳು.*
ಬ್ರಹ್ಮತೇಜಸ್ಸಂಪನ್ನರಾದ ದೃಢವಾಗಿ ಪರಮಾತ್ಮಯೋಗಯುಕ್ತರಾದ ಶಮದಮಾದಿಸಹಿತರಾದ ಇಂಥ ತಾಪಸರೆಲ್ಲ ಶರಭಂಗಮಹರ್ಷಿಗಳ ಆಶ್ರಮದಲ್ಲಿ ಶ್ರೀರಾಮನ ಬಳಿಗೆ ಬಂದರು— ಎನ್ನುತ್ತವೆ ಮೇಲಿನ ಶ್ಲೋಕಗಳು. ಹೀಗೆ, ರಾಮಾಯಣಕ್ಕೂ ತಪಸ್ಸಿಗೂ ಅವಿನಾಭಾವ ಸಂಬಂಧವಿದೆ. (ಒಂದರ ವಿನಾ ಮತ್ತೊಂದಿಲ್ಲವೆಂಬುದಕ್ಕೆ ಅವಿನಾಭಾವಸಂಬಂಧ ಎನ್ನುವರು. ತಪವಿಲ್ಲದೆ ರಾಮಾಯಣವಿಲ್ಲ, ರಾಮಾಯಣ / ಪರಮಾತ್ಮಪಥವಿಲ್ಲದ ತಪವಿಲ್ಲ.)
*ರಾಮಾಯಣದ ಆಧ್ಯಾತ್ಮಿಕ ಅರ್ಥ*
*ತೀರ್ತ್ವಾ ಮೋಹಾರ್ಣವಂ ಹತ್ವಾ ರಾಗದ್ವೇಷಾದಿರಾಕ್ಷಸಾನ್ |*
*ಶಾನ್ತಿಸೀತಾಸಮಾಯುಕ್ತಃ ಆತ್ಮಾರಾಮೋ ವಿರಾಜತೇ ||*
_“ಮೋಹಶರಧಿಯ ದಾಂಟಿ ದ್ವೇಷರಾಗಾದಿ ದನು_
_ಜಾದಿಗಳ ಸಂಹರಿಸಿ ಶಾಂತಿರೂಪಿಣಿಯ |_
_ಮಾತೆ ಸೀತೆಯ ಪಡೆದು ಆತ್ಮವದು ತನ್ನೊಳಗೆ_
_ತಾನೆ ರಮಿಸುತ ನಿಂತು ಬೆಳಗುತಿಹುದು ||”_
ಎಂದಿರುವರು *ಆದಿಶಂಕರಭಗವತ್ಪಾದರು.*
*ಆಚಾರ್ಯ ಶ್ರೀ ವೇದಾಂತದೇಶಿಕರು* ಹೀಗೆ ಹೇಳಿದ್ದಾರೆ—
*ದರ್ಪೋದಗ್ರದಶೇಂದ್ರಿಯಾನನಮನೋನಕ್ತಂಚರಾಧಿಷ್ಠಿತೇ |*
*ದೇಹೇऽಸ್ಮಿನ್ ಭವಸಿಂಧುನಾ ಪರಿಗತೇ ದೀನಾಂ ದಶಾಮಾಸ್ಥಿತಃ ||*
*ಅದ್ಯತ್ವೇ ಹನುಮತ್ಸಮೇನ ಗುರುಣಾ ಪ್ರಖ್ಯಾಪಿತಾರ್ಥಃ ಪುಮಾನ್ |*
*ಲಂಕಾರುದ್ಧವಿದೇಹರಾಜತನಯಾ ನ್ಯಾಯೇನ ಲಾಲಪ್ಯತೇ ||*
_ದರ್ಪದಿಂದ ಮತ್ತವಾಗಿ ಕೆರಳಿರುವ ಇಂದ್ರಿಯಗಳೆಂಬ ೧೦ ಮುಖಗಳುಳ್ಳ (೫ ಜ್ಞಾನೇಂದ್ರಿಯಗಳು + ೫ ಕರ್ಮೇಂದ್ರಿಯಗಳು) ಮನಸ್ಸೆಂಬ ನಿಶಾಚರ / ರಾಕ್ಷಸ ರಾವಣನು ಭವಸಾಗರದಿಂದಾವೃತವಾದ ಈ ದೇಹವೆಂಬ ಲಂಕೆಯನ್ನು ತನ್ನ ನಿಯಂತ್ರಣದಲ್ಲಿಟ್ಟಿರುವನು. ಅಂತಹ ದೇಹದಲ್ಲಿ ಸೆರೆಯಾದ ಜೀವವೇ ಸೀತೆಯು. ಹೀಗಿರಲು, ಭವತಾರಕಮಾರ್ಗದರ್ಶಕನಾದ ಗುರುವೇ ಹನುಮಸ್ವರೂಪಿಯು. ಆತನಿಗೂ ಪ್ರಭುವಾದ ದೇವದೇವ ಶ್ರೀರಾಮಚಂದ್ರನು ಇಂದ್ರಿಯಸಹಿತ ಮನವೆಂಬ ರಾವಣನ ಸೆರೆಯಿಂದ ಸೀತಾರೂಪೀ ಜೀವಾತ್ಮನನ್ನು ಬಿಡಿಸಿ, ಧರ್ಮ-ನ್ಯಾಯಗಳನ್ನು ಮರುಸ್ಥಾಪಿಸಿ ಪರಮಾನಂದವನ್ನೀಯುತ್ತಾನೆ._
*ಗೋವಿಂದರಾಜೀಯ “ರಾಮಾಯಣಭೂಷಣ”ವ್ಯಾಖ್ಯೆಯ ಅವತಾರಿಕಾ*
*ಕ್ವಚಿತ್ ಪದಾರ್ಥಂ ಕ್ವಚಿದನ್ವಯಾರ್ಥಂ ಕ್ವಚಿತ್ ಪದಚ್ಛೇದಸಮರ್ಥನಾನಿ |*
*ಕ್ವಚಿತ್ ಕ್ವಚಿದ್ಗಾಢನಿಗೂಢಭಾವಂ ವಕ್ಷ್ಯೇ ಯಥಾಪೇಕ್ಷಮವೇಕ್ಷಣೀಯಮ್ ||*
_ಕೆಲವು ಕಡೆ ಪದಗಳ ಅರ್ಥವನ್ನೂ, ಬೇರೆ ಕಡೆ ಹಿಂದುಮುಂದಾಗಿರುವ ಶ್ಲೋಕದ ಪದಗಳನ್ನು ಸರಿಯಾಗಿ ಗದ್ಯವಾಗಿ ವಾಕ್ಯರೂಪದಲ್ಲಿ ಸಂಯೋಜಿಸಿ ಅನ್ವಯಾರ್ಥವನ್ನೂ, ಇನ್ನು ಕೆಲವೆಡೆ ಸಂಯುಕ್ತಪದಗಳನ್ನು ಒಡೆದು ಸರಳೀಕರಿಸಿ, ಅಲ್ಲಲ್ಲಿ ಪದಪ್ರಯೋಗ / ಕಥಾಪಥಕ್ಕೆ ಸಮರ್ಥನೆಗಳನ್ನೂ, ಮತ್ತೆ ಹಲವೆಡೆ ಗಾಢವಾದ / ಆಳವಾದ ಹಾಗೂ ನಿಗೂಢ / ರಹಸ್ಯವಾದ ಅಂತರ್ಭಾವವನ್ನೂ ಅಗತ್ಯಕ್ಕೆ ತಕ್ಕಂತೆ (ಯಥಾಪೇಕ್ಷಮ್), ಹೇಳುವೆನು; ಮುಂದೆ ಓದಬೇಕು / ವೀಕ್ಷಿಸಬೇಕು. (ಓದುವವರಾಗಿರಿ)._
*ವೈಕುಣ್ಠೇ ತು ಪರೇ ಲೋಕೇ ಶ್ರಿಯಾ ಸಾರ್ಧಂ ಜಗತ್ಪತಿಃ |*
*ಆಸ್ತೇ ವಿಷ್ಣುರಚಿನ್ತ್ಯಾತ್ಮಾ ಭಕ್ತೈರ್ಭಾಗವತೈಸ್ಸಹ ||*
_ಎಂಬ ಮಾತಿನಂತೆ, ಎಲ್ಲ ಕಾಮನೆಗಳನ್ನೂ ಪೂರೈಸಿಕೊಂಡ, ಎಲ್ಲ ಕಲ್ಯಾಣಗುಣಗಳಿಂದ ಕೂಡಿದ, ಚಿಂತನೆಗೆ ನಿಲುಕದವನಾದ, ಎಲ್ಲರ ಪರಮಾಧಿಪತಿಯಾದ / ಸರ್ವೇಶ್ವರನಾದ / ಜಗತ್ತಿನ ಒಡೆಯನಾದ ಶ್ರೀಪತಿ / ಲಕ್ಷ್ಮೀರಮಣನಾದ ಮಹಾವಿಷ್ಣುವು, ತನ್ನ ಭಕ್ತರು ಹಾಗೂ ಪರಮಭಾಗವತರೊಂದಿಗೆ ಪರಮಧಾಮವೆನಿಸಿದ ದಿವ್ಯಲೋಕವಾದ ವೈಕುಂಠದಲ್ಲಿ ಮಹಾಮಣಿಮಂಟಪದಲ್ಲಿ ಶ್ರೀದೇವಿ / ಲಕ್ಷ್ಮೀ, ಭೂದೇವಿ / ಕ್ಷ್ಮಾ, ಹಾಗೂ ನೀಳಾದೇವಿಯರೊಂದಿಗೆ, ರತ್ನಸಿಂಹಾಸನದ ಮಧ್ಯೆ ಆಸೀನನಾಗಿ, ನಿತ್ಯಮುಕ್ತರಿಂದ ನಿರಂತರವಾಗಿ ಸೇವೆ ಮಾಡಲ್ಪಟ್ಟ ಚರಣಕಮಲಗಳುಳ್ಳವನಾದರೂ, ತನ್ನ ಪಾದಸೇವೆಗೆ ಅನರ್ಹರೂ, ಅಲ್ಪಜ್ಞಾನಿಗಳೂ ಆದ ಪ್ರಳಯದಲ್ಲಿ ಪ್ರಕೃತಿಲೀನರಾಗುವಂಥ ಜೀವರ ಕುರಿತು,
*ಏವಂ ಸಂಸೃತಿಚಕ್ರಸ್ಥೇ ಭ್ರಾಮ್ಯಮಾಣೇ ಸ್ವಕರ್ಮಭಿಃ |*
*ಜೀವೇ ದುಃಖಾಕುಲೇ ವಿಷ್ಣೋಃ ಕೃಪಾ ಕಾऽಪ್ಯುಪಜಾಯತೇ ||*
_ಹೀಗೆ “ಪುನರಪಿ ಮರಣಂ ಪುನರಪಿ ಮರಣಂ” ಎಂಬಂತಿರುವ ಸಂಸಾರಚಕ್ರದಲ್ಲಿ ಸಿಲುಕಿ ತನ್ನ ಪುಣ್ಯಪಾಪಾದಿಕರ್ಮಗಳ ದೆಸೆಯಿಂದ ಭ್ರಮಾಧೀನನಾದ ಜೀವನು ದುಃಖಸಾಗರದಲ್ಲಿ ಮುಳುಗಿರುವಾಗ, ಆ ವಿಷ್ಣುವಿನ ಯಾವುದೋ ಒಂದು ಬಗೆಯ ಕೃಪೆಯು ಆತನ ಮೇಲುಂಟಾಗುವುದು_
ಎಂಬ ಮಾತಿನಂತೆ ಮಹಾವಿಷ್ಣುವು ದಯೆದೋರುವ ಮನವುಳ್ಳವನಾಗಿ,
*ವಿಚಿತ್ರಾ ದೇಹಸಂಪತ್ತಿರೀಶ್ವರಾಯ ನಿವೇದಿತುಮ್ |*
*ಪೂರ್ವಮೇವ ಕೃತಾ ಬ್ರಹ್ಮನ್ ಹಸ್ತಪಾದಾದಿಸಂಯುತಾ ||*
_ಕೈಕಾಲುಗಳಿಂದ ಕೂಡಿದ ವಿಚಿತ್ರವೂ, ಅದ್ಭುತವೂ ಆದ ದೇಹಸಂಪತ್ತು ಪರಮಾತ್ಮನ ಸೇವೆ, ನಿವೇದನೆಗಳಿಗಾಗಿ ಬಹುಹಿಂದೆಯೇ ಆತನಿಂದಲೇ ನಿರ್ಮಿಸಲ್ಪಟ್ಟಿತು_
ಎಂಬಂತೆ, ಮಹತ್ತತ್ತ್ವಾದಿಗಳನ್ನು ಅನುಕ್ರಮವಾಗಿ ಸೃಷ್ಟಿಸಿ ಭಗವಂತನ ಪದಪದ್ಮಗಳ ಸೇವೆಗನುಕೂಲವಾಗುವಂತೆ ದೇಹೇಂದ್ರಿಯಗಳನ್ನು ಸೃಜಿಸಿ, ನದಿಯನ್ನು ದಾಟಲು ದೋಣಿಯೇ ಮುಂತಾದ ಪ್ಲವನಸಾಧನ / ತೇಲುವ ಸಲಕರಣೆ ಗಳಿರುವಂತೆಯೇ, ಬಹುವಿಷಯವಾಸನೆಗಳುಳ್ಳ ಭವಸಾಗರದ ತರಣಕ್ಕಾಗಿ ಅವುಗಳಲ್ಲಿ ಸತ್ ಅಸತ್, ಸರಿ ತಪ್ಪು, ಧರ್ಮ ಅಧರ್ಮ, ನ್ಯಾಯ ಅನ್ಯಾಯ ಮುಂತಾದವುಗಳನ್ನು ವಿವೇಚಿಸಲು, *“ಶಾಸನಾತ್ ಶಾಸ್ತ್ರಮ್ (ಶಾಸನರೂಪಿಯಾದದ್ದರಿಂದ ಶಾಸ್ತ್ರವು)”* ಎಂಬಂತೆ ವೇದಾದಿ ಸಕಲ ಸತ್ ಶಾಸ್ತ್ರಗಳನ್ನು ನಿರ್ಮಿಸಿಯೂ, ಅವುಗಳನ್ನು ಉಲ್ಲಂಘಿಸುವವರಿಗೆ ತಾನೇ ಪ್ರತ್ಯಕ್ಷವಾಗಿ ಈ ನಿಯಮಗಳನ್ನು ಪಾಲಿಸಿ ಆಚರಿಸಿ ತೋರಿಸಿ ಶಿಕ್ಷಿಸಲೋಸುಗ ಭೂ-ಪತಿಯು ರಾಮಾದಿರೂಪಿನಿಂದ ೪ ವಿಧವಾಗಿ ಅವತರಿಸಬಯಸಿದವನಾಗಿ, ಬ್ರಹ್ಮೇಂದ್ರಾದಿ ದೇವತೆಗಳಿಂದ ಪ್ರಾರ್ಥಿಸಲ್ಪಟ್ಟು, ದಶರಥನ ಮನೋಭೀಷ್ಟವನ್ನು ಪೂರೈಸುವುದಕ್ಕಾಗಿಯೂ ನಾಲ್ಕುರೂಪಿನಿಂದ ಅವತರಿಸಿದನು. ಚತುರ್ಮುಖ ಬ್ರಹ್ಮನು ಈ ರಾಮಚರಿತೆಯ ಪಾವಿತ್ರ್ಯವನ್ನು ಶಾಶ್ವತವಾಗಿ ಲೋಕದ ಸಮಸ್ತರ ಅನುಗ್ರಹಕ್ಕಾಗಿ ಉಳಿಸಲು ಶತಕೋಟಿಪ್ರವಿಸ್ತಾರವಾಗಿ ವಿರಚಿಸಿ ನಾರದಾದಿಗಳಿಗೆ ಉಪದೇಶಿಸಿ, ಭೂಲೋಕದವರಿಗಾಗಿ ಸಂಕ್ಷಿಪ್ತವಾಗಿ ರಚಿಸಲು ವಾಲ್ಮೀಕಿಯನ್ನು ಪ್ರಚೋದಿಸಲು ನಾರದರನ್ನು ಕಳುಹಿಸಿದನು. ಹೀಗೆ ನಾರದರು ವಾಲ್ಮೀಕಿಗೆ ಸಂಕ್ಷೇಪವಾಗಿ ರಾಮಾಯಣವನ್ನು ಬೋಧಿಸಿದರು.
*ವಾಲ್ಮೀಕಿನಾ ಚ ಯತ್ ಪ್ರೋಕ್ತಂ ರಾಮೋಪಾಖ್ಯಾನಮುತ್ತಮಮ್ |*
*ಬ್ರಹ್ಮಣಾ ಚೋದಿತಂ ತಚ್ಚ ಶತಕೋಟಿಪ್ರವಿಸ್ತರಮ್ |*
*ಆಹೃತ್ಯ ನಾರದೇನೈವ ವಾಲ್ಮೀಕಾಯ ನಿವೇದಿತಮ್ ||*
(ಮತ್ಸ್ಯಪುರಾಣ)
*ಮಹೇಶ್ವರತೀರ್ಥೀಯವ್ಯಾಖ್ಯಾರಂಭದಿಂದ*
*ವಾಲ್ಮೀಕಿರಭವದ್ಬ್ರಹ್ಮಾ ವಾಣೀ ವಾಕ್ತಸ್ಯ ರೂಪಿಣೀ |*
*ಚಕಾರ ರಾಮಚರಿತಂ ಪಾವನಂ ಚರಿತವ್ರತಃ ||*
(ಸ್ಕಾಂದಪುರಾಣದಲ್ಲಿ ಶಿವನಿಂದ ಪಾರ್ವತಿಗೆ ಪ್ರೋಕ್ತವಾದದ್ದು)
_ಸಾಕ್ಷಾತ್ ಸೃಷ್ಟಿಕರ್ತನಾದ ಚತುರ್ಮುಖಬ್ರಹ್ಮನೇ ವಾಲ್ಮೀಕಿಯಾಗಿ ಹಾಗೂ ಆತನ ಪತ್ನಿ ವಾಣಿಯೇ ವಾಲ್ಮೀಕಿಯ, ರಾಮಾಯಣವೆಂಬ ವಾಗ್ರೂಪಿಣಿಯಾಗಿ ಅವತರಿಸಿದರು. ಹೀಗೆ ಬ್ರಹ್ಮಾಂಶಸಂಭೂತನಾದ ಪ್ರಾಚೇತಸ ಭಾರ್ಗವನಾದ ವಾಲ್ಮೀಕಿ ಮಹರ್ಷಿಯು ರಾಮಾಯಣರಚನೆಯನ್ನು ವ್ರತದಂತೆ ಭಕ್ತ್ಯಾದರಶ್ರದ್ಧಾತಿಶಯಪೂರ್ವಕವಾಗಿ ಆಚರಿಸಿ ವಿರಚಿಸಿದನು._
*ಪೀಠಿಕೆಯ ಮಂಗಲ*
*ಧನ್ಯಂ ಯಶಸ್ಯಮಾಯುಷ್ಯಂ ರಾಜ್ಞಾಂ ಚ ವಿಜಯಾವಹಮ್ |*
*ಇದಂ ಪವಿತ್ರಂ ಪಾಪಘ್ನಂ ಪುಣ್ಯಂ ವೇದೈಶ್ಚ ಸಮ್ಮಿತಮ್ ||*
*ಆಯುಷ್ಯಮಾರೋಗ್ಯಕರಂ ಯಶಸ್ಯಂ*
*ಸ್ತ್ರಿಯಶ್ಚ ಮುಖ್ಯಾಃ ಸುಖಮುತ್ತಮಂ ಚ |*
*ಯಃ ಕರ್ಣಾಞ್ಜಲಿಸಂಪುಟೈರಹರಹಃ ಸಮ್ಯಕ್ ಪಿಬತ್ಯಾದರಾತ್ |*
*ವಾಲ್ಮೀಕೇರ್ವದನಾರವಿನ್ದಗಲಿತಂ ರಾಮಾಯಣಾಖ್ಯಂ ಮಧು |*
*ಜನ್ಮವ್ಯಾಧಿಜರಾವಿಪತ್ತಿಮರಣೈರತ್ಯನ್ತಸೋಪದ್ರವಮ್ |*
*ಸಂಸಾರಂ ಸ ವಿಹಾಯ ಗಚ್ಛತಿ ಪುಮಾನ್ ವಿಷ್ಣೋಃ ಪದಂ ಶಾಶ್ವತಮ್ ||*
_ವಾಲ್ಮೀಕಿಯ ವದನಾರವಿಂದ / ಮುಖಕಮಲದಿಂದ ಹೊರಬಂದ ಈ ಪುಣ್ಯಕರವೂ, ಪರಮಪವಿತ್ರವೂ, ಪಾಪಹಾರಿಯೂ, ವೇದಸಮ್ಮತವೂ, ರಾಜರುಗಳಿಗೆ ವಿಜಯಪ್ರದವೂ, ಧನ್ಯತೆ ಹಾಗೂ ಯಶೋಮಯವಾದ ದೀರ್ಘಾಯುಷ್ಯಪ್ರದವೂ, ಆರೋಗ್ಯಕರವೂ ಆದ ಶ್ರೀಮದ್ರಾಮಾಯಣವೆಂಬ ಮಧುವನ್ನು / ಜೇನನ್ನು ಯಾವನು ತನ್ನ ಕಿವಿಗಳೆರಡರಿಂದ ಶ್ರವಣಮಾಡುತ್ತಾ ದಿನದಿನವೂ ಆದರಾತಿಶಯಪೂರ್ವಕ ಸೂಕ್ತರೀತಿಯಿಂದ ಪಾನಮಾಡುತ್ತಾನೋ ಅಂತಹ ಮಾನವನು, ಶ್ರೇಷ್ಠಪತ್ನ್ಯಾದಿ ಸ್ತ್ರೀಯರನ್ನೂ, ಉತ್ತಮ / ಶ್ರೇಷ್ಠವಾದ ಸುಖವನ್ನೂ ಇಹದಲ್ಲಿ ಹೊಂದಿ, ಜನನ-ರೋಗ-ವೃದ್ಧಾಪ್ಯ-ವಿಪತ್ತು-ಮರಣಾದಿ ಸಕಲ ಉಪದ್ರವ ಸಹಿತವಾದ ಸಂಸಾರವನ್ನು ತೊರೆದು ಪರದಲ್ಲಿ ಶಾಶ್ವತಪದವಾದ ವಿಷ್ಣುವನ್ನೇ ಹೊಂದುತ್ತಾನೆ._
*ವಿನಿಯೋಗ*
ಓಮ್ ಅಸ್ಯ ಶ್ರೀವಾಲ್ಮೀಕಿರಾಮಾಯಣಮಹಾಮನ್ತ್ರಸ್ಯ, ಭಗವಾನ್-ವಾಲ್ಮೀಕಿ-ಋಷಿಃ | ಅನುಷ್ಟುಪ್ ಛನ್ದಃ | ಶ್ರೀರಾಮಃ ಪರಮಾತ್ಮಾ ದೇವತಾ | ಅಭಯಂ ಸರ್ವಭೂತೇಭ್ಯ ಇತಿ ಬೀಜಮ್ | ಅಙ್ಗುಲ್ಯಗ್ರೇಣ ತಾನ್ ಹನ್ಯಾಮ್ ಇತಿ ಶಕ್ತಿಃ | ಏತದಸ್ತ್ರಬಲಂ ದಿವ್ಯಮ್ ಇತಿ ಕೀಲಕಮ್ | ಭಗವನ್ನಾರಾಯಣೋ ದೇವ ಇತಿ ತತ್ತ್ವಮ್ | ಧರ್ಮಾತ್ಮಾ ಸತ್ಯಸನ್ಧಶ್ಚ ಇತಿ ಅಸ್ತ್ರಮ್ | ಪುರುಷಾರ್ಥ-ಚತುಷ್ಟಯ-ಸಿದ್ಧ್ಯರ್ಥಂ ಪಾಠೇ ವಿನಿಯೋಗಃ ||
ಬ್ರಹ್ಮಾ ಸ್ವಯಂಭೂರ್ಭಗವಾನ್ ದೇವಾಶ್ಚೈವ ತಪಸ್ವಿನಃ |
ಸಿದ್ಧಿಂ ದಿಶನ್ತು ಮೇ ಸರ್ವೇ ದೇವಾಃ ಸರ್ಷಿಗಣಾಸ್ತ್ವಿಹ ||
ಶ್ರೀರಾಮಧ್ಯಾನಮ್
ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾಮಣ್ಡಪೇ
ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸಂಸ್ಥಿತಮ್ |
ಅಗ್ರೇವಾಚಯತಿ ಪ್ರಭಞ್ಜನಸುತೇ ತತ್ತ್ವಂ ಮುನಿಭ್ಯಃ ಪರಂ
ವ್ಯಾಖ್ಯಾನ್ತಂ ಭರತಾದಿಭಿಃ ಪರಿವೃತಂ ರಾಮಂ ಭಜೇ ಶ್ಯಾಮಲಮ್ ||
ವಾಮೇ ಭೂಮಿಸುತಾ ಪುರಸ್ತು ಹನುಮಾನ್ ಪಶ್ಚಾತ್ ಸುಮಿತ್ರಾಸುತಃ
ಶತ್ರುಘ್ನೋ ಭರತಶ್ಚ ಪಾರ್ಶ್ವದಲಯೋರ್ವಾಯ್ವಾದಿಕೋಣೇಷು ಚ |
ಸುಗ್ರೀವಶ್ಚ ವಿಭೀಷಣಶ್ಚ ಯುವರಾಟ್ ತಾರಾಸುತೋ ಜಾಂಬವಾನ್
ಮಧ್ಯೇ ನೀಲಸರೋಜಕೋಮಲರುಚಿಂ ರಾಮಂ ಭಜೇ ಶ್ಯಾಮಲಮ್ ||
ಶ್ರೀರಾಮಾಯಣಸಂಪುಟಮನ್ತ್ರಃ
“ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||”
(ಇದನ್ನು ರಾಮಾಯಣಪಾರಾಯಣದ ಮೊದಲು ಹಾಗೂ ಕೊನೆಯಲ್ಲಿ ಪಠಿಸಿ ಸಂಪುಟಿತ ಪಾರಾಯಣ ಮಾಡಿದರೆ ಸಮಸ್ತ ಮನಃಕಾಮನಾಸಿದ್ಧಿಯಾಗುವುದು.)
ಶ್ರೀರಾಮಾಯಣಕವಚಮ್
ಓಂ ನಮೋ ಅಷ್ಟಾದಶತತ್ತ್ವರೂಪಾಯ ರಾಮಾಯಣಮಹಾಮನ್ತ್ರಸ್ವರೂಪಾಯ |
ಮಾನಿಷಾದೇತಿ ಮೂಲಂ ಶಿರೋ ಅವತು |
ಅನುಕ್ರಮಣಿಕಾಬೀಜಂ ಮುಖಮ್ ಅವತು |
ಋಷ್ಯಶೃಙ್ಗೋಪಾಖ್ಯಾನಮ್ ಋಷಿಃ ಜಿಹ್ವಾಮ್ ಅವತು |
ಜಾನಕೀಲಾಭೋ ಅನುಷ್ಟುಪ್-ಛನ್ದೋ ಅವತು ಗಲಮ್ |
ಕೇಕಯ್ಯಾಜ್ಞಾದೇವತಾ ಹೃದಯಮ್ ಅವತು |
ಸೀತಾಲಕ್ಷ್ಮಣಾನುಗಮನಶ್ರೀರಾಮಹರ್ಷಾಃ ಪ್ರಮಾಣಂ ಜಠರಮ್ ಅವತು |
ಭಗವದ್ಭಕ್ತಿಃ ಶಕ್ತಿಃ ಅವತು ಮೇ ಮಧ್ಯಮ್ |
ಶಕ್ತಿಮಾನ್ ಧರ್ಮೋ ಮುನೀನಾಂ ಪಾಲನಂ ಮಮ ಊರೂ ರಕ್ಷತು |
ಮಾರೀಚವಚನಂ ಪ್ರತಿಪಾಲನಮ್ ಅವತು ಪಾದೌ |
ಸುಗ್ರೀವಮೈತ್ರಮ್ ಅರ್ಥೋ ಅವತು ಸ್ತನೌ |
ನಿರ್ಣಯೋ ಹನುಮಚ್ಚೇಷ್ಟಾ ಅವತು ಬಾಹೂ |
ಕರ್ತಾ ಸಂಪಾತಿಪಕ್ಷೋದ್ಗಮೋ ಅವತು ಸ್ಕನ್ಧೌ |
ಪ್ರಯೋಜನಂ ವಿಭೀಷಣರಾಜ್ಯಂ ಗ್ರೀವಾಂ ಮಮಾವತು |
ರಾವಣವಧಃ ಸ್ವರೂಪಮ್ ಅವತು ಕರ್ಣೌ |
ಸೀತೋದ್ಧಾರೋ ಲಕ್ಷ್ಮಣಮ್ ಅವತು ನಾಸಿಕೇ |
ಅಮೋಘಸ್ತವ ಸಂಸ್ತವೋ ಅವತು ಜೀವಾತ್ಮಾನಾಮ್ |
ನಯಃ ಕಾಲಲಕ್ಷ್ಮಣಸಂವಾದೋ ಅವತು ನಾಭಿಮ್ |
ಆಚರಣೀಯಂ ಶ್ರೀರಾಮಾದಿಧರ್ಮಂ ಸರ್ವಾಙ್ಗಂ ಮಮ ಅವತು | ಇತಿ ರಾಮಾಯಣಕವಚಮ್ ||
(ಬೃಹದ್ಧರ್ಮಪುರಾಣಮ್, ಪೂರ್ವಖಣ್ಡ ೨೫ನೆಯ ಅಧ್ಯಾಯ. ಈ ಪುರಾಣದ ಪ್ರಕಾರ, ಮಂಗಲಾಚರಣೆಯ ಮೊದಲು ರಾಮಾಯಣಕವಚವನ್ನು ಪಠಿಸಬೇಕು.)
ಆದಿಕವಿಶ್ರೀವಾಲ್ಮೀಕಿಮುನಿವನ್ದನಮ್
ಕೂಜನ್ತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವನ್ದೇ ವಾಲ್ಮೀಕಿಕೋಕಿಲಮ್ ||
ಯಃ ಪಿಬನ್ ಸತತಂ ರಾಮಚರಿತಾಮೃತಸಾಗರಮ್ |
ಅತೃಪ್ತಸ್ತಂ ಮುನಿಂ ವನ್ದೇ ಪ್ರಾಚೇತಸಮಕಲ್ಮಷಮ್ ||
ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ |
ವೇದಃ ಪ್ರಾಚೇತಸಾದಾಸೀತ್ ಸಾಕ್ಷಾದ್ ರಾಮಾಯಣಾತ್ಮನಾ ||
ಆಞ್ಜನೇಯವನ್ದನಮ್
ಗೋಷ್ಪದೀಕೃತವಾರೀಶಂ ಮಶಕೀಕೃತರಾಕ್ಷಸಮ್ |
ರಾಮಾಯಣಮಹಾಮಾಲಾರತ್ನಂ ವನ್ದೇऽನಿಲಾತ್ಮಜಮ್ ||
ಅಞ್ಜನಾನನ್ದನಂ ವೀರಂ ಜಾನಕೀಶೋಕನಾಶನಮ್ |
ಕಪೀಶಮಕ್ಷಹನ್ತಾರಂ ವನ್ದೇ ಲಙ್ಕಾಭಯಙ್ಕರಮ್ ||
ಉಲ್ಲಂಙ್ಘ್ಯ ಸಿನ್ಧೋಸ್ಸಲಿಲಂ ಸಲೀಲಂ
ಯಶ್ಶೋಕವಹ್ನಿಂ ಜನಕಾತ್ಮಜಾಯಾಃ |
ಆದಾಯ ತೇನೈವ ದದಾಹ ಲಙ್ಕಾಂ
ನಮಾಮಿ ತಂ ಪ್ರಾಞ್ಜಲಿರಾಞ್ಜನೇಯಮ್ ||
ಆಞ್ಜನೇಯಮತಿಪಾಟಲಾನನಂ
ಕಾಞ್ಚನಾದ್ರಿ-ಕಮನೀಯ-ವಿಗ್ರಹಮ್ |
ಪಾರಿಜಾತತರುಮೂಲವಾಸಿನಂ
ಭಾವಯಾಮಿ ಪವಮಾನನನ್ದನಮ್ ||
ಯತ್ರ ಯತ್ರ ರಘುನಾಥಕೀರ್ತನಂ
ತತ್ರ ತತ್ರ ಕೃತ-ಮಸ್ತಕಾಞ್ಜಲಿಮ್ |
ಬಾಷ್ಪವಾರಿ-ಪರಿಪೂರ್ಣ-ಲೋಚನಂ
ಮಾರುತಿಂ ನಮತ ರಾಕ್ಷಸಾನ್ತಕಮ್ ||
ಮನೋಜವಂ ಮಾರುತತುಲ್ಯವೇಗಂ
ಜಿತೇನ್ದ್ರಿಯಂ ಬುದ್ಧಿಮತಾಂ ವರಿಷ್ಠಮ್ |
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀರಾಮದೂತಂ ಶಿರಸಾ ನಮಾಮಿ ||
ಆಞ್ಜನೇಯಂ ಮಹಾವೀರಂ ಕೋವಿದಂ ರಿಪುಭೈರವಮ್ |
ವಾನರಾಧ್ಯಕ್ಷಸಂಸೇವ್ಯಂ ರಾಮದೂತಂ ಸ್ಮರಾಮ್ಯಹಮ್ ||
ರಾಮಾಯಣ-ಪಞ್ಚೋಪಚಾರ-ಸ್ತುತಿಃ
ಸದಾ ಶ್ರವಣಮಾತ್ರೇಣ ಪಾಪಿನಾಂ ಸದ್ಗತಿಪ್ರದೇ |
ಶುಭೇ ರಾಮಕಥೇ ತುಭ್ಯಂ ಗನ್ಧಮಾದೌ ಸಮರ್ಪಯೇ ||
ಬಾಲಾದಿಸಪ್ತಕಾಣ್ಡೈಸ್ತು ಸರ್ವಲೋಕಸುಖಪ್ರದಮ್ |
ರಾಮಾಯಣ! ಮಹೋದಾರ! ಪುಷ್ಪಂ ತೇऽದ್ಯ ಸಮರ್ಪಯೇ ||
ಯಸ್ಯೈಕಶ್ಲೋಕಪಾಠಸ್ಯ ಫಲಂ ಸರ್ವಫಲಾಧಿಕಮ್ |
ತಸ್ಮೈ ರಾಮಾಯಣಾಯಾದ್ಯ ದಶಾಙ್ಗಂ ಧೂಪಮರ್ಪಯೇ ||
ಯಸ್ಯ ಲೋಕೇ ಪ್ರಣೀತಾರೋ ವಾಲ್ಮೀಕ್ಯಾದಿ-ಮಹರ್ಷಯಃ |
ತಸ್ಮೈ ರಾಮಚರಿತ್ರಾಯ ಘೃತದೀಪಂ ಸಮರ್ಪಯೇ ||
ಶ್ರೂಯತೇ ಬ್ರಹ್ಮಣೋ ಲೋಕೇ ಶತಕೋಟಿಪ್ರವಿಸ್ತರಮ್ |
ರೂಪಂ ರಾಮಾಯಣಸ್ಯಾಸ್ಯ ತಸ್ಮೈ ನೈವೇದ್ಯಮರ್ಪಯೇ ||
ರಾಮಾಯಣನಮಸ್ಕಾರಃ
ಚರಿತಂ ರಘುನಾಥಸ್ಯ ಶತಕೋಟಿಪ್ರವಿಸ್ತರಮ್ |
ಏಕೈಕಮಕ್ಷರಂ ಪುಂಸಾಂ ಮಹಾಪಾತಕನಾಶನಮ್ ||
ವಾಲ್ಮೀಕಿಗಿರಿಸಮ್ಭೂತಾ ರಾಮಾಮ್ಭೋನಿಧಿಸಙ್ಗತಾ |
ಶ್ರೀಮದ್ರಾಮಾಯಣೀಗಙ್ಗಾ ಪುನಾತಿ ಭುವನತ್ರಯಮ್ ||
ವಾಲ್ಮೀಕಿಗಿರಿಸಮ್ಭೂತಾ ರಾಮಸಾಗರಗಾಮಿನೀ |
ಪುನಾತಿ ಭುವನಂ ಪುಣ್ಯಾ ರಾಮಾಯಣಮಹಾನದೀ ||
ಶ್ಲೋಕಸಾರಸಮಾಕೀರ್ಣಂ ಸರ್ವಕಲ್ಲೋಲಸಙ್ಕುಲಮ್ |
ಕಾಣ್ಡಗ್ರಾಹಮಹಾಮೀನಂ ವನ್ದೇ ರಾಮಾಯಣಾರ್ಣವಮ್ ||
ವಾಲ್ಮೀಕೇರ್ಮುನಿಸಿಂಹಸ್ಯ ಕವಿತಾವನಚಾರಿಣಃ |
ಶೃಣ್ವನ್ ರಾಮಕಥಾನಾದಂ ಕೋ ನ ಯಾತಿ ಪರಾಂ ಗತಿಮ್ ||
*ಏಕಶ್ಲೋಕಾತ್ಮಕಂ ರಾಮಾಯಣಮ್*
*ಪೂರ್ವಂ ರಾಮತಪೋವನಾಧಿಗಮನಂ ಹತ್ವಾ ಮೃಗಂ ಕಾಞ್ಚನಮ್ |*
*ವೈದೇಹೀಹರಣಂ ಜಟಾಯುಮರಣಂ ಸುಗ್ರೀವಸಂಭಾಷಣಮ್ ||*
*ವಾಲೀನಿಗ್ರಹಣಂ ಸಮುದ್ರತರಣಂ ಲಙ್ಕಾಪುರೀದಾಹನಮ್ |*
*ಪಶ್ಚಾದ್ರಾವಣಕುಂಭಕರ್ಣಹನನಂ ಹ್ಯೇತದ್ಧಿ ರಾಮಾಯಣಮ್ ||*
_ಮೊದಲು ಶ್ರೀರಾಮನು ತಪಸ್ವಿಗಳಿದ್ದ ಅರಣ್ಯಕ್ಕೆ ಹೋದುದು, ಬಂಗಾರದಂಥ ಮೈಬಣ್ಣದ ಮಾಯಾಜಿಂಕೆಯ ರೂಪಿನಲ್ಲಿ ಬಂದ ಮಾರೀಚನನ್ನು ಕೊಂದುದು, ರಾವಣನಿಂದ ಕಪಟಸಂನ್ಯಾಸಿವೇಷದಲ್ಲಿ ವಿದೇಹರಾಜ ಜನಕನ ಪುತ್ರಿ ವೈದೇಹಿಯೆನಿಸಿದ ರಾಮಭಾರ್ಯೆ ಸೀತಾದೇವಿಯ ಅಪಹರಣ, ರಾವಣನನ್ನು ತಡೆದ ಜಟಾಯುವಿನ ವಧೆ, ರಾಮಸುಗ್ರೀವಸಖ್ಯ, ವಾಲಿಮೋಕ್ಷ, ಹನೂಮಂತನಿಂದ ಸಾಗರೋಲ್ಲಂಘನ, ಲಂಕಾದಹನ, ಬಳಿಕ ರಾವಣ-ಕುಂಭಕರ್ಣಾದಿಗಳ ಸಂಹಾರ— ಇದೇ ರಾಮಾಯಣದ ಕಥಾಸಾರ._
Comments
Post a Comment